ಬಾರ್ಡರ್-ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪಡೆದ 4 ಕ್ರಿಕೆಟಿಗರು

ಬಾರ್ಡರ್-ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪಡೆದ 4 ಕ್ರಿಕೆಟಿಗರು

ಬಾರ್ಡರ್-ಗವಾಸ್ಕರ್ ಟ್ರೋಫಿ ಈಗ ವಿಶ್ವದ ಅತ್ಯಂತ ಪ್ರತಿಷ್ಠಿತ ಟೆಸ್ಟ್ ಸರಣಿ ಎನಿಸಿಕೊಂಡಿದೆ. ಬಲಿಷ್ಠ ಎರಡು ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಕದನ ಇದಾಗಿದ್ದು ಈ ಎರಡು ತಂಡಗಳ ಸರಣಿಯನ್ನು ನೋಡಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಅಭಿಮಾನಿಗಳು ಮಾತ್ರವಲ್ಲ ಇತರ ದೇಶಗಳ ಕ್ರಿಕೆಟ್ ಪ್ರೇಮಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ.

ಸ್ವತಃ ಆಸ್ಟ್ರೇಲಿಯಾದ ಕ್ರಿಕೆಟಿಗರು ಬಾರ್ಡರ್-ಗವಾಸ್ಕರ್ ಟ್ರೋಪಿ ಆಶಸ್ ಸರಣಿಗಿಂತಲೂ ಕಠಿಣ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಎರಡು ದೇಶಗಳ ಇಬ್ಬರು ಶ್ರೇಷ್ಠ ಆಟಗಾರರಾದ ಅಲನ್ ಬಾರ್ಡರ್ ಹಾಗೂ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಈ ಸರಣಿಯನ್ನು ಆಯೋಜಿಸಲಾಗುತ್ತಿದ್ದು ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಈ ಸರಣಿಯಲ್ಲಿ ಎರಡು ತಂಡಗಳು ಮುಖಾಮುಖಿಯಾಗಿತ್ತಿದೆ. 1996ರಿಂದ ಈ ಸರಣಿ ಆಯೋಜನೆಯಾಗುತ್ತಿದೆ.

ಈ ಪ್ರತಿಷ್ಠಿತ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಬೇಕು, ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳಬೇಕು ಎಂಬುದು ಈ ಸರಣಿಯಲ್ಲಿ ಭಾಗಿಯಾಗುವ ಎರಡು ರಾಷ್ಟ್ರಗಳ ಆಟಗಾರರ ಕನಸಾಗಿರುತ್ತದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಾಲ್ವರು ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..


4. ಸ್ಟೀವ್ ಸ್ಮಿತ್- 3 ಪಂದ್ಯ ಶ್ರೇಷ್ಠ ಪ್ರಶಸ್ತಿ

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ಪರವಾಗಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಎಂಬ ದಾಖಲೆಯನ್ನು ಸ್ಟೀವ್ ಸ್ಮಿತ್ ಹೊಂದಿದ್ದಾರೆ. ಅಗ್ರ ನಾಲ್ಕು ಜನರು ಪಟ್ಟಿಯಲ್ಲಿರುವ ಏಕೈಕ ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸ್ಟೀವ್ ಸ್ಮಿತ್ 3 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಚೇತೇಶ್ವರ್ ಪೂಜಾರ- 4 ಪಂದ್ಯ ಶ್ರೇಷ್ಠ ಪ್ರಶಸ್ತಿ

ಭಾರತದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ದಾಖಲೆ ಹೊಂದಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ಎರಡು ದೇಶಗಳಲ್ಲಿಯೂ ಪೂಜಾರ ದಾಖಲೆ ಉತ್ತವಾಗಿದೆ. ಈ ಪ್ರತಿಷ್ಠಿತ ಸರಣಿಯಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಪೂಜಾರ ಕೂಡ ಇದ್ದಾರೆ. ಇತ್ತೀಚೆಗಷ್ಟೇ ಮೂರನೇ ಟೆಸ್ಟ್ ಪಂದ್ಯವನ್ನು ಆಡಿರುವ ಚೇತೇಶ್ವರ್ ಪೂಜಾರ 4 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ರವೀಂದ್ರ ಜಡೇಜಾ- 4 ಪಂದ್ಯ ಶ್ರೇಷ್ಠ ಪ್ರಶಸ್ತಿ

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಸುದೀರ್ಘ ಕಾಲದ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಪಿಯಲ್ಲಿ ಜಡೇಜಾ ಆಸ್ಟ್ರೇಲಿಯಾಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿಯೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಜಡೇಜಾ ನಾಲ್ಕನೇ ಬಾರಿಗೆ ಈ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ವಿಶೇಷವೆಂದರೆ ನಾಗ್ಪುರದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿಯೂ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು

 ಸಚಿನ್ ತೆಂಡೂಲ್ಕರ್ 5 ಪಂದ್ಯ ಶ್ರೇಷ್ಠ ಪ್ರಶಸ್ತಿ

ಭಾರತದ ದಿಗ್ಗಜ ಆಟಗಾರ ಸಚೊನ್ ತೆಂಡೂಲ್ಕರ್ ಕ್ರಿಕೆಟ್‌ನಲ್ಲಿ ಅನೇಕ ಸಾರ್ವಕಾಲಿಕ ದಾಖಲೆಗಳನ್ನು ಹೊಂದಿರುವ ಶ್ರೇಷ್ಠ ಆಟಗಾರ. ಆಸ್ಟ್ರೇಲಿಯಾ ವಿರುದ್ಧ ಯಾವುದೇ ಮಾದರಿಯಲ್ಲಿಯೂ ಸಚಿನ್ ತೆಂಡೂಲ್ಕರ್ ಅದ್ಭುತ ದಾಖಲೆ ಹೊಂದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಇನ್ನು ಕೂಡ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿಯೇ ಇದೆ. ಈ ಪ್ರತಿಷ್ಠಿತ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಐದು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಹೆದ್ದುಕೊಂಡ ದಾಖಲೆ ಹೊಂದಿದ್ದಾರೆ. ಇದು ಈ ಸರಣಿಯಲ್ಲಿ ಈವರೆಗೆ ಮುರಿಯಲಾಗದೆ ಉಳಿದುಕೊಂಡಿರುವ ದಾಖಲೆಯಾಗಿದೆ.