ಮೇನಲ್ಲಿ 'ಬೈರತಿ ರಣಗಲ್' ಶೂಟಿಂಗ್ ಶುರು.. ರಾಮ್‌ಚರಣ್ ಜೊತೆ ಸಿನಿಮಾ ಕನ್ಫರ್ಮ್": ನರ್ತನ್

ಮೇನಲ್ಲಿ 'ಬೈರತಿ ರಣಗಲ್' ಶೂಟಿಂಗ್ ಶುರು.. ರಾಮ್‌ಚರಣ್ ಜೊತೆ ಸಿನಿಮಾ ಕನ್ಫರ್ಮ್": ನರ್ತನ್

ಒಂದೇ ಒಂದು ಸಿನಿಮಾ ಮಾಡಿ ಕಳೆದ 5 ವರ್ಷಗಳಿಂದ ಸುದ್ದಿಯಲ್ಲಿರುವ ನಿರ್ದೇಶಕ ನರ್ತನ್. 2017ರಲ್ಲಿ ತೆರೆಕಂಡಿದ್ದ 'ಮಫ್ತಿ' ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ನರ್ತನ್ ಟೇಕಿಂಗ್, ಶಿವಣ್ಣನ ಆಕ್ಟಿಂಗ್‌ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದರು.

ಅಂದಿನಿಂದಲೂ ನರ್ತನ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೀತಿತ್ತು. ಇತ್ತೀಚೆಗೆ 'ಬೈರತಿ ರಣಗಲ್' ಸಿನಿಮಾ ಅನೌನ್ಸ್ ಆಗಿತ್ತು.

'ಮಫ್ತಿ' ಚಿತ್ರದ ಪ್ರೀಕ್ವೆಲ್ ಆಗಿರುವ 'ಬೈರತಿ ರಣಗಲ್' ಚಿತ್ರದ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಶಿವಣ್ಣ ಮತ್ತೊಮ್ಮೆ ಮಾಫಿಯಾ ಡಾನ್ ಬೈರತಿ ರಣಗಲ್ ಪಾತ್ರದಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ ಜೊತೆ ನರ್ತನ್ ಸಿನಿಮಾ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ ಅದು ಪಕ್ಕಾ ಆಗಿರಲಿಲ್ಲ. ಈ ನಡುವೆ ಕೊರೊನಾ ಹಾವಳಿ ಶುರುವಾಗಿ ನರ್ತನ್ ನಿರ್ದೇಶನದ ಯಾವುದೇ ಸಿನಿಮಾ ಸೆಟ್ಟೇರಿರಲಿಲ್ಲ. ಇದೀಗ ಫೈನಲಿ 'ಮಫ್ತಿ' ಪ್ರೀಕ್ವೆಲ್‌ಗೆ ಶುರುವಾಗ್ತಿದೆ.

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ 'ವೇದ' ಸೂಪರ್ ಹಿಟ್ ಆಗಿದೆ. ಇದೇ ಬ್ಯಾನರ್‌ನಲ್ಲಿ 'ಬೈರತಿ ರಣಗಲ್' ಸಿನಿಮಾ ಮೂಡಿ ಬರಲಿದೆ. ಅಚ್ಚರಿ ಎಂದರೆ ಈ ಬಾರಿ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲಾಗ್ತಿದೆ. 'ಬೈರತಿ ರಣಗಲ್' ರಾಕ್ಷಸನಂತಾಗಲೂ ಕಾರಣ ಏನು ಎನ್ನುವುದನ್ನು 5 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ತರಲಾಗುತ್ತಿದೆ. 'ಮಫ್ತಿ' ಚಿತ್ರವನ್ನು ಪರಭಾಷಿಕರು ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಈ ಲೆಕ್ಕಾಚಾರ ಶುರುವಾಗಿದೆ.

ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಶಿವಣ್ಣ ಮತ್ತು ನರ್ತನ್ ಕಾಂಬಿನೇಷನ್ 'ಬೈರತಿ ರಣಗಲ್' ಸಿನಿಮಾ ಅನೌನ್ಸ್ ಆಗಿತ್ತು. ಇದೀಗ ಸಿನಿಮಾ ಶೂಟಿಂಗ್ ಹಾಗೂ ರಾಮ್‌ ಚರಣ್‌ ಜೊತೆಗಿನ ಸಿನಿಮಾ ಬಗ್ಗೆ ನಿರ್ದೇಶಕ ನರ್ತನ್ ಫಿಲ್ಮಿಬೀಟ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಟಾಲಿವುಡ್ ಎಂಟ್ರಿಯನ್ನು ಕೂಡ ಖಚಿತಪಡಿಸಿದ್ದಾರೆ.

"ಸದ್ಯ 'ಬೈರತಿ ರಣಗಲ್' ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೀತಿದೆ. ಡೈಲಾಗ್ಸ್ ಬರೆಯುವ ಕೆಲಸ ಚಾಲ್ತಿಯಲ್ಲಿದೆ. ಮೇನಲ್ಲಿ ಸಿನಿಮಾ ಮುಹೂರ್ತ ನೆರವೇರಿಸಿ ಶೂಟಿಂಗ್ ಆರಂಭಿಸುವ ಪ್ಲ್ಯಾನ್ ಇದೆ. ಅದಕ್ಕಾಗಿ ಸರ್ವ ಸನ್ನದ್ಧವಾಗ್ತಿದೆ. ಬಹಳ ಹಿಂದೆಯೇ ಕಥೆ ಸಿದ್ಧವಾಗಿತ್ತು. ಆದರೆ ಸಿನಿಮಾ ಶುರು ಮಾಡಲು ಸಮಯ ಕೂಡಿ ಬಂದಿರಲಿಲ್ಲ. ಶಿವಣ್ಣ 'ಘೋಸ್ಟ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಮೇನಲ್ಲಿ 'ಬೈರತಿ ರಣಗಲ್' ಚಿತ್ರಕ್ಕಾಗಿ ಬಿಡುವು ಮಾಡಿಕೊಳ್ಳಲಿದ್ದಾರೆ" ಎಂದು ನರ್ತನ್ ಹೇಳಿದ್ದಾರೆ.

ಕೆಲ ದಿನಗಳಿಂದ ನರ್ತನ್ ಟಾಲಿವುಡ್ ಎಂಟ್ರಿ ಬಗ್ಗೆ ಗುಸುಗುಸು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ರಾಮ್‌ಚರಣ್ ಬರ್ತ್‌ಡೇ ಪಾರ್ಟಿಯಲ್ಲಿ ನರ್ತನ್ ಕಾಣಿಸಿಕೊಂಡಿದ್ದರು. ಹಾಗಾಗಿ ಈ ವಿಚಾರ ಮತ್ತಷ್ಟು ಇಂಬು ನೀಡಿದಂತಾಗಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ನರ್ತನ್ ಉತ್ತರಿಸಿದ್ದಾರೆ. "ರಾಮ್‌ಚರಣ್ ಜೊತೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತಿರುವುದು ನಿಜ. ಕೆವಿಎನ್‌ ಪ್ರೊಡಕ್ಷನ್ಸ್ ಹಾಗೂ ತೆಲುಗಿನ ಯುವಿ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಲಿವೆ. ಆದರೆ ಯಾವಾಗ ಎನ್ನುವುದು ಪಕ್ಕಾ ಆಗಿಲ್ಲ" ಎಂದಿದ್ದಾರೆ.

ಶಂಕರ್ ನಿರ್ದೇಶನದ 'ಗೇಮ್‌ ಚೇಂಜರ್' ಚಿತ್ರದಲ್ಲಿ ಸದ್ಯ ರಾಮ್‌ಚರಣ್ ನಟಿಸುತ್ತಿದ್ದಾರೆ. ಮೆಗಾ ಪವರ್ ಸ್ಟಾರ್ 16ನೇ ಚಿತ್ರಕ್ಕೆ ಬುಚ್ಚಿಬಾಬು ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಆ ಸಿನಿಮಾ ನಂತರ ಚರಣ್‌ ಹಾಗೂ ನರ್ತನ್ ಕಾಂಬಿನೇಷನ್‌ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. 'ಬೈರತಿ ರಣಗಲ್' ಮುಗಿಸಿ ಈ ವರ್ಷಾಂತ್ಯಕ್ಕೆ ರಾಮ್‌ಚರಣ್ 17ನೇ ಚಿತ್ರದ ಕೆಲಸಗಳನ್ನು ನರ್ತನ್ ಆರಂಭಿಸುವ ಸಾಧ್ಯತೆಯಿದೆ. ಈ ಸಿನಿಮಾ ಕೂಡ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ.

ಈಗಾಗಲೇ ಪ್ರಶಾಂತ್ ನೀಲ್ ಹಾಗೂ ಎ. ಹರ್ಷ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. KGF ಸಾರಥಿ ಪ್ರಭಾಸ್ ನಟನೆಯ 'ಸಲಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಗೋಪಿಚಂದನ್ ನಟನೆಯ ಚಿತ್ರಕ್ಕೆ ಎ. ಹರ್ಷ ಸಾರಥ್ಯ ಇದೆ.