ಪಾದಯಾತ್ರೆಗಾಗಿ ಮೇಕೆದಾಟು ಪ್ರದೇಶ ಪರಿಶೀಲನೆ ಮಾಡಿದ ಡಿ.ಕೆ. ಶಿವಕುಮಾರ್

ಪಾದಯಾತ್ರೆಗಾಗಿ ಮೇಕೆದಾಟು ಪ್ರದೇಶ ಪರಿಶೀಲನೆ ಮಾಡಿದ ಡಿ.ಕೆ. ಶಿವಕುಮಾರ್

ರಾಮನಗರ, ನವೆಂಬರ್ 29: ಮೇಕೆದಾಟು ಅಣೆಕಟ್ಟು ಯೋಜನೆಗಾಗಿ ಒತ್ತಾಯಿಸಿ ಮೇಕೆದಾಟು ಸ್ಥಳದಿಂದ ಬೆಂಗಳೂರಿನವರೆಗೆ ಸುಮಾರು 120 ಕಿ.ಮೀ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದು, ಇನ್ನೇನಿದ್ದರೂ ದಿನಾಂಕ ಘೋಷಣೆ ಮಾತ್ರ ಬಾಕಿ ಉಳಿದಿದೆ.

ಪಾದಯಾತ್ರೆ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.

ಶಿವಕುಮಾರ್ ಸ್ವತಃ ಕನಕಪುರದ ಮೇಕೆದಾಟಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ಪಾದಯಾತ್ರೆ ಪ್ರಾರಂಭದ ಸ್ಥಳ, ಪಾದಯಾತ್ರೆ ಸಾಗುವ ಮಾರ್ಗ, ಪಾದಯಾತ್ರೆ ವಿಶ್ರಾಂತಿ ಪಡೆಯವ ಸ್ಥಳಗಳನ್ನು ನಿಗದಿ ಮಾಡುವ ನಿಟ್ಟಿನಲ್ಲಿ ಸ್ಥಳದ ಪರಿಶೀಲನೆ ನಡೆಸಿದರು.

ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಇದೇ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಲು ಸಜ್ಜಾಗುತ್ತಿದೆ. ಈ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಥಳ ಪರಿಶೀಲನೆಗಾಗಿ ಮೇಕೆದಾಟಿಗೆ ಆಗಮಿಸಿದ್ದರು.

ಮೇಕೆದಾಟು ಪರಿಶೀಲನೆ ವೇಳೆ ಅರ್ಕಾವತಿ ಕಾವೇರಿ ನದಿ ಸಂಗಮವಾಗುವ ಸ್ಥಳದಲ್ಲಿ ನೀರನ್ನು ಕುಡಿಯುವ ಮೂಲಕ ನಮ್ಮ ನೀರಿಗಾಗಿ ಹೋರಾಟ ಮಾಡುವುದಾಗಿ ತಿಳಿಸಿದಿರಲ್ಲದೇ, ಕಾವೇರಿ ನದಿಯಲ್ಲಿ ಕೆಲ ಹೊತ್ತು ತೆಪ್ಪದಲ್ಲಿ ವಿಹರಿಸಿದರು.

ಕಳೆದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಸಿದ್ಧಗೊಳಿಸಿ‌ ಅಧಿಕಾರಿಗಳ ತಂಡದ ಜೊತೆಗೆ ಸ್ಥಳ ಪರಿಶೀಲನೆ ನಡೆಸಿ ಯೋಜನೆಗೆ ಅಂದೇ ಹಸಿರು ನಿಶಾನೆ ತೋರಿದ್ದರು.

ರಾಜಕೀಯ ಸ್ಥಿತ್ಯಂತರದ ನಡುವೆ ಯೋಜನೆಯು ಕೂಡ ಅರ್ಧದಲ್ಲಿ ನಿಂತು‌ ಹೋಯಿತು. ನಂತರ ಬಿಜೆಪಿ ಸರ್ಕಾರದಲ್ಲೂ ಮೇಕೆದಾಟು ಯೋಜನೆಯ ಕಾರ್ಯಗತ ಮಾಡುವುದಾಗಿ ಹೇಳುತ್ತಿದೆ ಅಷ್ಟೇ. ಆದರೆ ಇದುವರೆಗೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಈಗಾಗಲೇ ತೀರ್ಮಾನ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಕೆದಾಟಿಗೆ ಬಂದು ಸುಮಾರು ಎರಡು ಗಂಟೆಗಳ ಕಾಲ‌ ಅಲ್ಲೇ ಇದ್ದು ಹೋರಾಟದ ರೂಪುರೇಷೆಯನ್ನು ಸಿದ್ಧತೆಗೊಳಿಸಲಾಯಿತು.

ಮೇಕೆದಾಟು ಹೋರಾಟ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ನಮ್ಮ ಜೊತೆಯಲ್ಲಿ ಯಾರೇ ಬಂದರೂ ಕರೆದುಕೊಂಡು ಹೋಗುತ್ತೇನೆ. ನೀರನ್ನು ನಾನು ಒಬ್ಬನೇ ಬಳಸುವುದಿಲ್ಲ. ಬೆಂಗಳೂರಿನಲ್ಲಿ ಎಲ್ಲರೂ ಬಳಸುತ್ತಾರೆ, ಹಾಗಾಗಿ ಎಲ್ಲರೂ ಮೇಕೆದಾಟು ಹೋರಾಟವನ್ನು ಬೆಂಬಲಿಸಿ ಎಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಿ," ಎಂದು ಕರೆ ನೀಡಿದರು.

ನಾನು ಬಿಜೆಪಿ, ಜೆಡಿಎಸ್ ಹಾಗೂ ಇತರೆ ಹೋರಾಟಗಾರರು, ಸಂಘಗಳಿಗೂ ಆಮಂತ್ರಣ ಮಾಡುತ್ತೇನೆ, ಅವರೂ ಜೊತೆಗೆ ಬರಲಿ. ಮೇಕೆದಾಟು ಉಳಿಸಿ ಬೆಂಗಳೂರಿಗೆ ನೀರು ಕೊಡಿ ಎಂದು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

"ಇನ್ನು ಬಿಜೆಪಿ ಅವರದ್ದು ಡಬಲ್ ಇಂಜಿನ್ ಸರ್ಕಾರ ಇದ್ದ ಹಾಗೆ. ಮೇಕೆದಾಟು ವಿಚಾರದಲ್ಲಿ ಯಾವುದೇ ಕಾನೂನು ತೊಡಕಿಲ್ಲ ಎಂದು ಆಗಲೇ ಸಿಎಂ ಹೇಳಿದ್ದಾರೆ‌. ಆದರೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಕ್ಲಿಯರೆನ್ಸ್ ಕೊಡಬೇಕು ಎನ್ನುತ್ತಿದ್ದಾರೆ."

"ಮೇಕೆದಾಟು ನಿರ್ಮಾಣ ಜಾಗದಲ್ಲಿ ನನ್ನದು ಕೂಡ ಜಮೀನಿದೆ. ಆದರೆ ನಾವು ಯಾರು ತಕರಾರು ಮಾಡುತ್ತಿಲ್ಲ. ಅಲ್ಲಿ ಎರಡು ಮೂರು ಹಳ್ಳಿ ಮುಳುಗಿ ಹೋಗುತ್ತವೆ. ರಾಜ್ಯಕ್ಕೆ ಒಳೆಯದಾಗಲಿ ಅಂತ ಅಲ್ಲಿಗೆ ಹೋಗಿ ನ್ಯಾಯ ಪಂಚಾಯಿತಿ ಮಾಡಿದ್ದೇನೆ," ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್ ತಿಳಿಸಿದರು.