ಧಾರವಾಡದ ಎಸಿಪಿ ಅನುಷಾ ಅವರ ಮೇಲೆ ಸೀಮೆ ಎಣ್ಣೆ ಎರಚಿದ ವಕೀಲ ಚೌಧರಿ
ಧಾರವಾಡದ ಸುಪರ ಮಾರ್ಕೆಟ್ ತೆರವು ಕಾರ್ಯಾಚರಣೆಯ ವೇಳೆ ಪೊಲೀಸರು ಹಾಗೂ ವ್ಯಾಪಾರಸ್ಥರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಇಂದು ಮುಂದಾಗಿತ್ತು. ಅಂಗಡಿಗಳನ್ನು ತೆರವುಗೊಳಿಸದಂತೆ ಅಂಗಡಿಕಾರರು ಪಟ್ಟು ಹಿಡಿದರು. ಇದಕ್ಕೆ ಸೊಪ್ಪು ಹಾಕದ ಪಾಲಿಕೆಯ ಅಧಿಕಾರಿಗಳು ನೋಟಿಸ್ ನೀಡಿ ಅಂಗಡಿಗಳ ತೆರವಿಗೆ ಮುಂದಾದರು. ಆಗ ಪಾಲಿಕೆಯ ಅಧಿಕಾರಿಗಳು, ಪೊಲೀಸರು ಮತ್ತು ಅಂಗಡಿಕಾರರ ಮಧ್ಯೆ ತೀವ್ರ ವಾಗ್ವಾದ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ವಕೀಲ ಎಂ.ಎA. ಚೌಧರಿ ತಮ್ಮ ಮೇಲೆ ಕೆರೋಸಿನ್ ಸುರಿದುಕೊಂಡು ಹೈಡ್ರಾಮಾ ಸೃಷ್ಟಿಸಿದರು. ಈ ಅವಘಢವನ್ನು ತಡೆಯಲು ಮುಂದಾದ ಧಾರವಾಡದ ಎಸಿಪಿ ಅನುಷಾ ಅವರ ಮೇಲೂ ಸೀಮೆ ಎಣ್ಣೆ ಎರಚಿ ಕಿರುಚಾಟ ನಡೆಸಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ವಕೀಲ ಚೌಧರಿ ಅವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.