ರಾಜಕೀಯಕ್ಕೆ ಇಳಿಯುವ ನಿರ್ಧಾರ ಸಮಾಜಕ್ಕೆ ಬಿಟ್ಟಿದ್ದೇವೆ ಪದ್ಮರಾಜ್ -ಸತ್ಯಜಿತ್ ಸುರತ್ಕಲ್

ರಾಜಕೀಯಕ್ಕೆ ಇಳಿಯುವ ನಿರ್ಧಾರ ಸಮಾಜಕ್ಕೆ ಬಿಟ್ಟಿದ್ದೇವೆ ಪದ್ಮರಾಜ್ -ಸತ್ಯಜಿತ್ ಸುರತ್ಕಲ್

ಮಂಗಳೂರು: ಬಿಲ್ಲವ ಮುಖಂಡರಾದ ಪದ್ಮರಾಜ್ ಆರ್. ಮತ್ತು ಸತ್ಯಜಿತ್ ಸುರತ್ಕಲ್ ಅವರು ಚುನಾವಣಾ ರಾಜಕೀಯಕ್ಕೆ ಇಳಿಯುವ ನಿರ್ಧಾರವನ್ನು ಸಮಾಜಕ್ಕೆ ಬಿಟ್ಟಿದ್ದಾರೆ. ಸಮಾಜದ ಏಳಿಗೆಗೆ ಸಂಬಧಿಸಿದ ಕೆಲಸಗಳಿಗೆ ತಮ್ಮ ಆದ್ಯತೆ. ಆದರೆ ಅವಕಾಶ ಲಭಿಸಿದರೆ ಮತ್ತು ಸ್ಪರ್ಧಿಸಲು ಸೀಟು ಕೊಟ್ಟರೆ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಇಚ್ಛೆಯನ್ನು ವ್ಯಕ್ತ

ಪಡಿಸಿದ್ದಾರೆ. ಇಬ್ಬರೂ ಮುಖಂಡರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

'ನಾನು ಈ ತನಕ ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿ ಕೊಂಡಿಲ್ಲ. ಅರ್ಜಿ ಸಲ್ಲಿಸಿಲ್ಲ. ಯಾವುದೇ ರಾಜಕೀಯ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿಲ್ಲ. ಬಡವರ ಸೇವೆ ನನ್ನ ಪ್ರಥಮ ಆದ್ಯತೆ. ಅದರೆ ಅನೇಕ ಮಂದಿ, ಆದರಲ್ಲೂ ವಿಶೇಷವಾಗಿ ಆರ್ಥಿಕ ಹಿಂದುಳಿದವರಿಂದ ನಾನು ರಾಜಕೀಯಕ್ಕೆ ಇಳಿಯ ಬೇಕೆಂಬ ಒತ್ತಡ ಬರುತ್ತಿದೆ. ನನಗೆ ರಾಜಕೀಯ ಆಸಕ್ತಿ ಇಲ್ಲ. ಅದರೂ ಸೂಕ್ತ ಸಮಯದಲ್ಲಿ ಅವಕಾಶ ಲಭಿಸಿದರೆ ಸಮಾಜದವರ ಮತ್ತು ಹಿತೈಷಿಗಳ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ' ಎಂದು ಗುರು ಬೆಳದಿಂಗಳು ಸಂಘಟನೆಯ ಅಧ್ಯಕ್ಷ ಪದ್ಮರಾಜ್ ಆರ್. ತಿಳಿಸಿದರು.

ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, 'ನಾನು ಸಮಾಜದ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದೇನೆ. ವೈಯಕ್ತಿಕವಾಗಿ ನನಗೆ ಚುನಾವಣಾ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಇದುವರೆಗೆ ಪಕ್ಷ ಮತ್ತು ನನ್ನ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ. ಆದರೆ ಒಂದೊಮ್ಮೆ ಸೀಟು ಕೊಟ್ಟರೆ ಸಮಾಜದ ಅಭಿಪ್ರಾಯ ಪಡೆದು ತೀರ್ಮಾನ ತೆಗೆದು ಕೊಳ್ಳುತೇನೆ ಎಂದರು.