ಮಲೆನಾಡು ಮಿತ್ರವೃಂದದಿಂದ ಮೂವರು ಗಣ್ಯರಿಗೆ ನುಡಿ ನಮನ

ಮಲೆನಾಡು ಮಿತ್ರವೃಂದದಿಂದ ಮೂವರು ಗಣ್ಯರಿಗೆ ನುಡಿ ನಮನ

ಬೆಂಗಳೂರು, ಸೆ.30- ಅರ್ಥಗರ್ಭಿತವಾಗಿ ಬದುಕು ಸಾಧಿಸಿದವರು ಜೀವನದಲ್ಲಿ ಸಾರ್ಥಕತೆ ಕಂಡವರು ಅನುಗಾಲವೂ ಸ್ಮರಣೀಯ. ಸಾರ್ಥಕ ಬದುಕು ಸಾಧಿಸಿ ಮೇರು ವ್ಯಕ್ತಿತ್ವ ರೂಪಿಸಿಕೊಂಡು ಇತ್ತೀಚೆಗೆ ಮಡಿದ ಮಲೆನಾಡಿನ ಮೂವರು ಗಣ್ಯ ಮಾನ್ಯರಿಗೆ ಮಲೆನಾಡು ಮಿತ್ರ ವೃಂದ ನುಡಿ ನಮನ ಸಲ್ಲಿಸಿತು.

ನಗರದ ಹೋಟೆಲ್ ಅಭಿಮಾನಿ ವಸತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್. ಟಾಗೂರ್, ಗಾಯಕರು ಮತ್ತು ಉದ್ಯಮಿಗಳಾದ ನಾಗೇಶ್ ಕೂಡ್ಲುಮಕ್ಕಿ, ರಾಜ್ಯ ಪ್ರಶಸ್ತಿ ವಿಜೇತ, ಜಾನಪದ ಗಾಯಕ ಕುಂಚೂರು ಹರೀಶ್ ಅವರಿಗೆ ನುಡಿ ನಮನ ಸಲ್ಲಿಸಿದ ಮಲೆನಾಡು ಮಿತ್ರ ವೃಂದ ಅವರ ಸಾರ್ಥಕ ಬದುಕನ್ನು ಸ್ಮರಿಸಿತು.

ಮಲೆನಾಡಿನ ಕುಗ್ರಾಮಗಳಲ್ಲಿ ಜನಿಸಿ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಈ ಗಣ್ಯರು, ತಾವು ಹುಟ್ಟಿದ ನೆಲಕ್ಕೆ ನಾಡಿಗೆ ತಂದಿರುವ ಕೀರ್ತಿಯ ಬಗ್ಗೆ ಗುಣಗಾನ ಮಾಡಲಾಯಿತು.

ಮಲೆನಾಡು ಮಿತ್ರ ವೃಂದದ ಅಧ್ಯಕ್ಷ ವಾಸಪ್ಪ ಪಡುಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ವಿ.ಆರ್. ಟಾಗೂರ್, ನಾಗೇಶ್ ಕೂಡ್ಲುಮಕ್ಕಿ, ಕುಂಚೂರು ಹರೀಶ್ ಅವರ ಸಾಧನೆ ಸ್ಮರಣೀಯವಾದುದು. ಕುಂಚೂರು ಹರೀಶ್ ಜಾನಪದ ಗಾಯಕರಾಗಿ ರಾಜ್ಯ ಪ್ರಶಸ್ತಿ ಪಡೆದು ಮಲೆನಾಡಿಗೆ ಕೀರ್ತಿ ತಂದಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು ಮಲೆನಾಡು ಮಿತ್ರ ವೃಂದದ ಸದಸ್ಯರಿಂದ ವತಿಯಿಂದ 2 ಲಕ್ಷ ರೂಗಳನ್ನು ಸಂಗ್ರಹಿಸಿ ಅವರ ಕುಟುಂಬದವರಿಗೆ ನೀಡುತ್ತಿರುವುದಾಗಿ ಹೇಳಿದರು.

ಪೀಣ್ಯ ಕೈಗಾರಿಕಾ ಪ್ರದೇಶದ ಮಾಜಿ ಅಧ್ಯಕ್ಷ ಹಾಗೂ ಕೆ.ವಿ.ಆರ್. ಟಾಗೂರ್ ಅವರ ಸಹಪಾಠಿಗಳಾದ ಮಲ್ಲಪ್ಪಗೌಡ ಕಲ್ಕುಳಿ ಮಾತನಾಡಿ, ಟಾಗೂರ್ ಅವರು ಶಿಸ್ತಿಗೆ ಹೆಸರಾದವರು. ಐಪಿಎಸ್ ಅಕಾರಿಯಾಗಿ ದಕ್ಷ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದವರು. ವಾರ್ತಾ ಇಲಾಖೆ ಆಯುಕ್ತರಾಗಿಯೂ ಕೂಡ ಉತ್ತಮ ಕೆಲಸ ಮಾಡಿದವರು ಎಂದು ಬಣ್ಣಿಸಿದರು.

ಮಾಜಿ ಅಧ್ಯಕ್ಷ ಅನಿಲ್ ಹೊಸಕೊಪ್ಪ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ಖಚಿತ ಈ ನಡುವೆ ನಡೆಸುವ ಜೀವನದಲ್ಲಿ ಮಾಡುವ ಸಾಧನೆ ಸಾರ್ಥಕವಾಗಿರಬೇಕು ಎಂಬುದನ್ನು ತೋರಿಸಿಕೊಟ್ಟವರು ಕೆ.ವಿ.ಆರ್. ಟಾಗೂರ್, ಹರೀಶಣ್ಣ ಮತ್ತು ನಾಗೇಶಣ್ಣ. ಮಲೆನಾಡಿನ ಕುಗ್ರಾಮಗಳಲ್ಲಿ ಜನಿಸಿ, ಹೊಸ ಆಯಾಮಗಳಿಗೆ ತೆರೆದುಕೊಂಡವರು. ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಇಲ್ಲಿನ ಜನರ ಬದುಕು ಕಟ್ಟಿಕೊಳ್ಳಲು ಹಲವು ಅವಕಾಶಗಳನ್ನು ಕಲ್ಪಿಸಿಕೊಟ್ಟವರು. ಅವರವರ ಕ್ಷೇತ್ರಗಳಲ್ಲಿ ಅವರು ಸಾರ್ಥಕ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು.

ಹುಟ್ಟು ಸಾವಿನ ಬಗ್ಗೆ ಕುವೆಂಪು, ದಿನಕರ ದೇಸಾಯಿ ಅವರ ಕವನಗಳನ್ನು ವಾಚಿಸಿ ವ್ಯಾಖ್ಯಾನ ಮಾಡುವ ಮೂಲಕ ಬದುಕಿನ ಸಾರ್ಥಕತೆಯನ್ನು ಬಣ್ಣಿಸಿದರು. ಉಪನ್ಯಾಸಕರಾದ ರಾಜಶೇಖರ್ ಕಿಗ್ಗ ನುಡಿ ನಮನ ಸಲ್ಲಿಸಿ ಮಾತನಾಡಿ, ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡು ಬೆಂಗಳೂರಿನಲ್ಲಿ ನೆಲೆಸಿ ಅಲ್ಲಿನ ಸಂಸ್ಕøತಿಯನ್ನು ಇಲ್ಲಿ ಬಿಂಬಿಸಿ ಸಾರ್ಥಕ ಬದುಕನ್ನು ಕಂಡಿದ್ದಾರೆ. ಮಲೆನಾಡು ಮಿತ್ರ ವೃಂದ ಇಂತಹ ಅದ್ಭುತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮತ್ತೊಂದು ಸಾರ್ಥಕತೆ ಮೆರೆದಿದೆ. ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ನೆರವು ನೀಡುತ್ತಿರುವುದು ಮೆಚ್ಚುವಂತಹ ವಿಷಯ ಎಂದು ಹೇಳಿದರು.

ಕವಿಶೈಲ ಸೊಸೈಟಿ ಅಧ್ಯಕ್ಷ ವನಮಾಲಯ್ಯ ಇಳಿಮನಿ, ಉದ್ಯಮಿಗಳಾದ ಮತ್ತೀಶ್ ಸಿಗಾಸೆ, ಮಣಿ ಹೆಗಡೆ, ಉಪಾಧ್ಯಕ್ಷ ಸಂದೇಶ್‍ಗೌಡ ಹಂದಿಗೋಡು, ಕಾರ್ಯದರ್ಶಿ ಅಂಜೂರು ಕುಡುಮಲ್ಲಿಗೆ ಮುಂತಾದವರು ಮಾತನಾಡಿ, ನುಡಿನಮನ ಸಲ್ಲಿಸಿ ಮಲೆನಾಡಿನ ಮನಸುಗಳ ಮಿಳಿತ ರಾಜಧಾನಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ನೋವಿಗೆ ಅವರ ತುಡಿತದ ಬಗ್ಗೆ ಪ್ರಶಂಸಿಸಿದರು.