ದುರ್ಗಾದೇವಿಯ ಕಾಲಿನಡಿ ಮಹಿಷಾಸುರನ ಬದಲು ಗಾಂಧಿ? ದೀದಿ ನಾಡಲ್ಲಿ ಬಿಸಿಯೇರಿದ ನವರಾತ್ರಿ- ಹೀಗಿದೆ ಸಮರ್ಥನೆ.

ದುರ್ಗಾದೇವಿಯ ಕಾಲಿನಡಿ ಮಹಿಷಾಸುರನ ಬದಲು ಗಾಂಧಿ? ದೀದಿ ನಾಡಲ್ಲಿ ಬಿಸಿಯೇರಿದ ನವರಾತ್ರಿ- ಹೀಗಿದೆ ಸಮರ್ಥನೆ.

ಕೋಲ್ಕತಾ (ಪಶ್ಚಿಮಬಂಗಾಳ): ನವರಾತ್ರಿ ಉತ್ಸವ ಅತಿ ಹೆಚ್ಚು ಕಳೆಗಟ್ಟುವುದು ಪಶ್ಚಿಮ ಬಂಗಾಳದಲ್ಲಿ. ಆದರೆ ಈ ವರ್ಷದ ನವರಾತ್ರಿ ಮಾತ್ರ ಭಾರಿ ವಿವಾದಕ್ಕೆ ಸಿಲುಕಿದೆ. ಅದಕ್ಕೆ ಕಾರಣ ಮಹಿಷಮರ್ದಿನಿಯ ವಿಗ್ರಹದ ಕಾಲಿನಡಿ ಮಹಿಷ ರಕ್ಕಸನ ಬದಲು ಗಾಂಧಿಯನ್ನು ಹೋಲುವ ತಲೆ ಇಡಲಾಗಿದೆ!

ಇಂಥದ್ದೊಂದು ವಿವಾದವನ್ನು ಹುಟ್ಟುಹಾಕಿರುವುದು ಅಖಿಲ ಭಾರತ ಹಿಂದೂ ಮಹಾಸಭಾ. ಮಹಾಸಭಾದಿಂದ ಪ್ರತಿಷ್ಠಾಪಿಸಲಾದ ದುರ್ಗಿಯ ವಿಗ್ರಹದ ಅಡಿ ರಕ್ಕಸನ ಬದಲು ಗಾಂಧಿಯನ್ನು ಹೋಲುವ ಮುಖ ಇಡಲಾಗಿದೆ. ಇದಕ್ಕೆ ವಿಪರೀತ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಗ್ರಹಕ್ಕೆ ಪೂಜೆ ನೆರವೇರಿಸಲು ಅವಕಾಶ ಕಲ್ಪಿಸಲಾಗಲಿಲ್ಲ.

ಈ ಸುದ್ದಿ ಭಾರಿ ವೈರಲ್​ ಆಗುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಂಧಿಯ ತಲೆಯನ್ನು ತೆರವುಗೊಳಿಸಿ, ರಕ್ಕಸನ ತಲೆಯನ್ನು ಇಟ್ಟಿದ್ದಾರೆ.

ಇದು ಗಾಂಧಿಯ ತಲೆ ಅಲ್ಲ ಎಂದು ಹಿಂದೂ ಮಹಾಸಭಾ ಸಮರ್ಥಿಸಿಕೊಂಡಿದೆ. ಈ ವಿಗ್ರಹಕ್ಕೆ ಕನ್ನಡಕ ಇರುವುದು ನಿಜವಾದರೂ ಅದು ಗಾಂಧಿಯ ಮುಖವಲ್ಲ. ಗಾಂಧಿಯ ಮುಖಕ್ಕೆ ಅದು ಹೋಲಿಕೆಯಾಗುತ್ತಿದ್ದರೆ ಅದು ಕಾಕತಾಳೀಯವಷ್ಟೇ ಎಂದು ಸಮರ್ಥನೆ ಬಂದಿದೆ. ದೇವಿ ಆರಾಧನೆಗೆ ಅನುಮತಿ ಪಡೆದಿದ್ದರೂ ಸಹಿತ ಪೂಜೆಗೆ ಅಡ್ಡಿ ಪಡಿಸಲಾಗಿದೆ. ಆರಾಧನೆ ಬಂದ್​ ಮಾಡುವಂತೆ ಸೂಚಿಸಲಾಗಿದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಮೊಹಂತೋ ಸುಂದರ ಗಿರಿ ಮಹಾರಾಜ್ ಆರೋಪಿಸಿದ್ದಾರೆ. (ಏಜೆನ್ಸೀಸ್​)