ಫ‌ಲಿತಾಂಶ ಸುಧಾರಣೆಗೆ ಪಿಯು ಇಲಾಖೆ ಆದ್ಯತೆ

ಫ‌ಲಿತಾಂಶ ಸುಧಾರಣೆಗೆ ಪಿಯು ಇಲಾಖೆ ಆದ್ಯತೆ

ಬೆಂಗಳೂರು: ದ್ವಿತೀಯ ಪಿಯುಸಿ ತರಗತಿಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಹಿಂದಿನ ವರ್ಷಗಳಲ್ಲಿ ಫ‌ಲಿತಾಂಶವಾರು ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳ ಮೇಲೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಹೆಚ್ಚಿನ ಗಮನ ಹರಿಸಿದೆ.

ವಿದ್ಯಾರ್ಥಿಗಳು ಕನಿಷ್ಠ ಅಂಕ ಪಡೆದು ಉತ್ತೀರ್ಣರಾಗಲು ಅವಶ್ಯವಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
2022ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.61.88ರಷ್ಟು ಫ‌ಲಿತಾಂಶ ಪ್ರಕಟವಾಗಿದೆ.

ಈ ಬಾರಿ ಕನಿಷ್ಠ ಶೇ.70ರಷ್ಟು ಫ‌ಲಿತಾಂಶ ಪಡೆಯುವ ಗುರಿ ಹೊಂದಿದೆ. ಫ‌ಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳು ಕನಿಷ್ಠ ಅಂಕಗಳನ್ನು ಪಡೆಯುವ ಕಾರ್ಯತಂತ್ರಗಳನ್ನು ರೂಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಕೊರೊನಾ ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಪಿಯು ಇಲಾಖೆ, ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾಗುವ ತಯಾರಿ ಮಾಡುತ್ತಿದೆ. ಇದಕ್ಕಾಗಿ ಶೈಕ್ಷಣಿಕ ವರ್ಷಾರಂಭದಿಂದಲೇ ಪ್ರತಿ ತಿಂಗಳು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಸಭೆ ನಡೆಸಲು ಸೂಚಿಸಿದೆ. ತಿಂಗಳಿಗೆ ಒಂದು ಬಾರಿ ಇಲಾಖೆ ನಿರ್ದೇಶಕರು ವೀಡಿಯೋ ಕಾನ್ಸರೆನ್ಸ್‌ನಲ್ಲಿ ಜಿಲ್ಲಾ ಉಪ ನಿರ್ದೇಶಕರಿಗೆ ಸಭೆ ನಡೆಸಿ ಶೈಕ್ಷಣಿಕ ಪ್ರಗತಿ, ಸಮಸ್ಯೆಗಳು ಹಾಗೂ ಇನ್ನಿತರ ವಿಷಯಗಳನ್ನು ಇಲಾಖೆ ನಿರ್ದೇಶಕರು ಆಲಿಸುತ್ತಿದ್ದಾರೆ.

ಎರಡನೆಯದಾಗಿ ಪ್ರತಿ ಅಧ್ಯಾಯದಲ್ಲಿ ಮುಖ್ಯವಾದ ಅಂಶಗಳನ್ನು ಗುರುತಿಸಿ ಪರೀಕ್ಷೆಗೆ ಕೇಳಬಹುದಾದ ಪ್ರಶ್ನೆಗಳ ಆಧಾರದಲ್ಲಿ ಬುಕ್‌ಲೆಟ್‌ ನೀಡುವ ಕೆಲಸ ಮಾಡುತ್ತಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮೂರೂ ವಿಭಾಗದಲ್ಲಿಯೂ ಕನಿಷ್ಠ ಅಂಕ ಪಡೆದು ಉತ್ತೀರ್ಣರಾಗುವ ಅಂಶಗಳನ್ನು ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಇದೆ. ಇದರ ಜತೆಗೆ ಈಗಾಗಲೇ ಜಾರಿಯಲ್ಲಿರುವ ಮಾದರಿ ಪ್ರಶ್ನೆಪತ್ರಿಕೆ ಸಂಗ್ರಹ ಸೇರಿದಂತೆ ವಿಶೇಷ ತರಗತಿಗಳನ್ನು ನಡೆಸುವ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಉನ್ನತ ಶಿಕ್ಷಣಕ್ಕೆ ದಾರಿ ಸುಗಮ ಆದ್ಯತೆ
ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಘಟ್ಟಗಳಾಗಿವೆ. ಯಾವುದೇ ವಿದ್ಯಾರ್ಥಿ ಉತ್ತೀರ್ಣರಾದರೆ, ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾನೆ. ಒಂದು ವೇಳೆ ಅನುತ್ತೀರ್ಣರಾದರೆ, ಅಲ್ಲಿಗೇ ಶೈಕ್ಷಣಿಕ ಜೀವನ ಮೊಟಕಾಗುವ ಸಾಧ್ಯತೆಗಳಿರುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಇಲಾಖೆ ಆಶಯ. ಈ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಜಿಲ್ಲೆ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಪಿಯು ಇಲಾಖೆ ನಿರ್ದೇಶಕ ಆರ್‌. ರಾಮಚಂದ್ರನ್‌.

ವಿದ್ಯಾರ್ಥಿಗಳು ಕನಿಷ್ಠ ಅಂಕ ಪಡೆದು ಉತ್ತೀರ್ಣರಾದರೆ, ಫ‌ಲಿತಾಂಶ ಕೂಡ ಸಹಜವಾಗಿ ಸುಧಾರಣೆಯಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಗಮನ ನೀಡುವಂತೆ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಸೂಚಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಪಿಯು ನಿರ್ದೇಶಕರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಅವಶ್ಯವಿರುವ ಕನಿಷ್ಠ ಅಂಕಗಳನ್ನು ಪಡೆಯಲು ಬೇಕಾದ ಪಠ್ಯವಸ್ತು ಮತ್ತು ಗುಣಮಟ್ಟದ ಬೋಧನೆಗೆ ಆದ್ಯತೆ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿ ಕಾಣುವ ವಾತಾವರಣ ನಿರ್ಮಿಸಲಾಗುತ್ತಿದೆ.
- ಆರ್‌. ರಾಮಚಂದ್ರನ್‌,
ಪಿಯು ಇಲಾಖೆ ನಿರ್ದೇಶಕರು