ಇಯರ್‌ಫೋನ್‌ ಹಾಕೊಂಡು ಹಳಿ ದಾಟುತ್ತಿದ್ದ ಯುವತಿಗೆ ರೈಲು ಡಿಕ್ಕಿ ಹೊಡೆದು ಸಾವು

ಇಯರ್‌ಫೋನ್‌ ಹಾಕೊಂಡು ಹಳಿ ದಾಟುತ್ತಿದ್ದ ಯುವತಿಗೆ ರೈಲು ಡಿಕ್ಕಿ ಹೊಡೆದು ಸಾವು

ನಾಗ್ಪುರ: ಇಯರ್‌ಫೋನ್‌ ಹಾಕಿಕೊಂಡಿದ್ದ 19 ವರ್ಷದ ಯುವತಿಯೊಬ್ಬಳು ವೇಗವಾಗಿ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಾಗ್ಪುರ ಜಿಲ್ಲೆಯ ಗುಮ್‌ಗಾಂವ್ ರೈಲು ನಿಲ್ದಾಣದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

ಮೃತಳನ್ನು ಭಂಡಾರಾ ಜಿಲ್ಲೆಯ ಸಟೋನಾ ಗ್ರಾಮದ ನಿವಾಸಿ ಆರತಿ ಮದನ್ ಗುರವ್ ಎಂದು ಗುರುತಿಸಲಾಗಿದೆ. ಈಕೆ ನಾಗ್ಪುರದ ಡೊಂಗರ್‌ಗಾಂವ್‌ನಲ್ಲಿರುವ ವೈಂಗಾಂಗಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಮಾಹಿತಿಯ ಪ್ರಕಾರ, ಆರತಿ ತಮ್ಮ ಸಂಬಂಧಿಕರೊಂದಿಗೆ ತಕಲಾಘಾಟ್ ಗ್ರಾಮದಿಂದ ಗುಮ್‌ಗಾಂವ್‌ಗೆ ಬೆಳಿಗ್ಗೆ ಬಸ್‌ನಲ್ಲಿ ಬಂದರು. ಈ ವೇಳೆ, ಆರತಿ ಇಯರ್‌ಫೋನ್‌ ಹಾಕಿಕೊಂಡು ರೈಲ್ವೇ ಹಳಿ ದಾಟಲು ಮುಂದಾಗಿದ್ದಾಳೆ. ಇದನ್ನು ಕಂಡ ಅವಳ ಜೊತೆಗಿದ್ದವರು ಎಷ್ಟೇ ಕೂಗಿದರೂ ಆಕೆಗೆ ಕೇಳಿಸದೇ ಮತ್ತು ಅದೇ ಹಳಿ ಮೇಲೆ ರೈಲು ಬರುವುದನ್ನು ಗಮನಿಸದೇ ಮುಂದೆ ಸಾಗಿದ್ದು, ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.