ಇನ್​ಸ್ಪೆಕ್ಟರ್​ ನಂದೀಶ್​ ಸಾವು ಪ್ರಕರಣ: ಆರಗ ಜ್ಞಾನೇಂದ್ರ- ಬೈರತಿ ಬಸವರಾಜು ಸೇರಿ 6 ಜನರ ವಿರುದ್ಧ ದೂರು

ಇನ್​ಸ್ಪೆಕ್ಟರ್​ ನಂದೀಶ್​ ಸಾವು ಪ್ರಕರಣ: ಆರಗ ಜ್ಞಾನೇಂದ್ರ- ಬೈರತಿ ಬಸವರಾಜು ಸೇರಿ 6 ಜನರ ವಿರುದ್ಧ ದೂರು

ಬೆಂಗಳೂರು: ಹೃದಯಾಘಾತದಿಂದ ಇನ್ಸ್‌ಪೆಕ್ಟರ್ ನಂದೀಶ್​ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರು ಹಾಗೂ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ 6 ಜನರ ವಿರುದ್ಧ ದೂರು​ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.

ಅಬ್ರಹಂ ಎಂಬುವವರು ಕೆ.ಆರ್.ಪುರ ಪೊಲೀಸ್​ ಠಾಣೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಬೈರತಿ ಬಸವರಾಜು, ಬೆಂಗಳೂರು ಪೊಲೀಸ್​ ಕಮಿಷನರ್ ಪ್ರತಾಪ್​ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ ಅವರ ವಿರುದ್ಧ ದೂರು ನೀಡಿದ್ದಾರೆ

ಬೈರತಿ ಬಸವರಾಜ್ ಅವರ ಸಂಬಂಧಿಗಳ ಕಿರುಕುಳವೇ ನಂದೀಶ್ ಹೃದಯಾಘಾತಕ್ಕೆ ಕಾರಣ. ಬೈರತಿ ಬಸವರಾಜ್​ರ ಸಂಬಂಧಿಗಳಾದ ಚಂದ್ರು ಹಾಗೂ ಗಣೇಶ್ ಅವರು ಹೇಳಿದಂತೆ ಕೇಳಲಿಲ್ಲ ಎಂದು ನಂದೀಶ್​ರನ್ನು ಟಾರ್ಗೆಟ್​ ಮಾಡಿದ್ದರು. ಉದ್ದೇಶಪೂರ್ವಕವಾಗಿ ಸಿಸಿಬಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ್ದರು. ನಂದೀಶ್​ರನ್ನು ಕೆಸಲದಿಂದ ಅಮಾನತು ಮಾಡುವಂತೆ ಒತ್ತಡ ಹಾಕಿದ್ದರು. ಅಲ್ಲದೆ ಪೋಸ್ಟಿಂಗ್​ಗಾಗಿ ಬೈರತಿ ಬಸವರಾಜ್​ಗೆ 50 ಲಕ್ಷ ರೂ. ಹಾಗೂ ಗೃಹ ಸಚಿವರಿಗೆ 20 ಲಕ್ಷ ರೂ. ನೀಡಲಾಗಿದೆ. ಸಸ್ಪೆಂಡ್ ಮಾಡುವ ಮೊದಲು ನಂದೀಶ್ ಕಡೆಯಿಂದ ಮಾಹಿತಿ ಕೇಳಿಲ್ಲ. ನ್ಯಾಚರಲ್‌ ಜಸ್ಟೀಸ್ ಇಲ್ಲದೇ ನಂದೀಶ್ ಅವರನ್ನ ಅಮಾನತು ಮಾಡಲಾಗಿತ್ತು. ಇದೆಲ್ಲವೂ ನಂದೀಶ್​ರ ಸಾವಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಬೇಕು. ಇಲ್ಲವಾದಲ್ಲಿ ನಾನು ಕೋರ್ಟ್​ಗೆ ಹೋಗುವೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಂ ಎಚ್ಚರಿಸಿದ್ದಾರೆ.

ಹುಣಸೂರು ಮೂಲದ ನಂದೀಶ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪಬ್​ವೊಂದಕ್ಕೆ ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಕೆಲಸದಿಂದ ಇತ್ತೀಚಿಗೆ ನಂದೀಶ್​ ಅವರನ್ನು ಅಮಾನತು ಮಾಡಲಾಗಿತ್ತು. ಇದರಿಂದ ತೀವ್ರ ನೊಂದಿದ್ದ ನಂದೀಶ್​, ಅ.27ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ನಂದೀಶ್​ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್​ ಕಮಿಷನರ್ ಪ್ರತಾಪ್​ ರೆಡ್ಡಿ ವಿರುದ್ಧ ಬೆಂಗಳೂರು ನಿವಾಸಿ ಜಾನ್ ಪಾಲ್ ಎಂಬುವವರೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ರಾಜಕೀಯ ಒತ್ತಡ ಮತ್ತು ದ್ವೇಷವೇ ಇನ್ಸ್‌ಪೆಕ್ಟರ್ ಅಮಾನತಿಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.