ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು
ಗದಗ: ಜಿಲ್ಲೆಯ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಕಾರ್ಯದರ್ಶಿಯಾಗಿದ್ದಂತ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಆದ್ರೇ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಲ್ಲದೇ, ಕರ್ತವ್ಯ ನಿರ್ಲಕ್ಷ್ಯ ಆರೋಪದಿಂದಾಗಿ ರಿಟರ್ನಿಂಗ್ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಶಿರಹಟ್ಟಿ- 65 ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ರಿಟರ್ನಿಂಗ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆದ್ರೇ ಅವರು ಸ್ಥಳೀಯ ಅಧಿಕಾರಿಯಾಗಿದ್ದ ಕಾರಣ, ಅವರನ್ನು ಬೇರೆಡೆಗೆ ಈ ಬಳಿಕ ವರ್ಗಾವಣೆ ಮಾಡಲಾಗಿತ್ತು. ಈ ಸ್ಥಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿಯಾಗಿದ್ದಂತ ಚಿದಾನಂದ್ ಎಂಬುವರನ್ನು ನಿಯೋಜಿಸಲಾಗಿತ್ತು.
ಆದ್ರೇ ಚಿದಾನಂದ್ ಮಾತ್ರ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಅವರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ನೋಟಿಸ್ ನೀಡಲಾಗಿತ್ತು. ನೋಟಿಸ್ ಗೂ ಉತ್ತರಿಸದ ಕಾರಣ, ಅವರನ್ನು ಪೋನ್ ಮೂಲಕ ಸಂಪರ್ಕಿಸೋ ಪ್ರಯತ್ನ ನಡೆಸಲಾಯಿತಾದರೂ, ಅದಕ್ಕೂ ಅವರು ಉತ್ತರಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಗದಗ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಇಕಾರಿ ವೈಶಾಲಿ ಎಂ.ಎಸ್ ಅವರು, ರಿಟರ್ನಿಂಗ್ ಅಧಿಕಾರಿ ವಿರುದ್ಧ ದೂರು ನೀಡಿದ್ದರು.
ಚುನಾವಣಾಧಿಕಾರಿಗಳ ದೂರಿನ ಹಿನ್ನಲೆಯಲ್ಲಿ ಗದಗದ ಶಹರ ಪೊಲೀಸ್ ಠಾಣೆಯಲ್ಲಿ ಚಿದಾನಂದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಮೂಲಕ ಕರ್ತವ್ಯ ನಿರ್ಲಕ್ಷ್ಯ ತೋರಿದಂತ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.