ಅರುಣಾಚಲ ಪ್ರದೇಶದಲ್ಲಿ 724 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್

ಅರುಣಾಚಲ ಪ್ರದೇಶ : ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶದಲ್ಲಿ ಸುಮಾರು 724 ಕೋಟಿ ಮೌಲ್ಯದ 28 ಮೂಲಸೌಕರ್ಯ ಯೋಜನೆಗಳನ್ನುದೇಶಕ್ಕೆ ಅರ್ಪಿಸಿದರು.
ಅರುಣಾಚಲ ಪ್ರದೇಶದ ಅಲಾಂಗ್-ಯಿನ್‌ಕಿಯಾಂಗ್ ರಸ್ತೆಯಲ್ಲಿರುವ ಸಿಯೋಮ್ ಸೇತುವೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವರು ಗಡಿ ರಸ್ತೆಗಳ ಸಂಸ್ಥೆಯ (BRO) ಯೋಜನೆಗಳನ್ನು ಉದ್ಘಾಟಿಸಿದರು.
ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು,ಈ ಯೋಜನೆಗಳು ಗಡಿ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಮತ್ತು ಗಡಿ ರಸ್ತೆಗಳ ಸಂಸ್ಥೆ (BRO) ಸಂಘಟಿತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಗಡಿ ಪ್ರದೇಶಗಳನ್ನು ಸಂಪರ್ಕಿಸುವುದು, ಅದರ ನಿವಾಸಿಗಳ ಅಭಿವೃದ್ಧಿ ಪಡಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದೇಳಿದರು.
ಜಗತ್ತು ಇಂದು ಹಲವು ಸಂಘರ್ಷಗಳಿಗೆ ಸಾಕ್ಷಿಯಾಗಿದೆ. ಭಾರತ ಯಾವಾಗಲೂ ಯುದ್ಧದ ವಿರುದ್ಧವಾಗಿದೆ. ನಾವು ಯುದ್ಧವನ್ನು ನಂಬುವುದಿಲ್ಲ, ಆದರೆ ಅದು ನಮ್ಮ ಮೇಲೆ ಬಲವಂತವಾಗಿ ಬಂದರೆ ನಾವು ಹೋರಾಡುತ್ತೇವೆ. ರಾಷ್ಟ್ರವು ಎಲ್ಲಾ ಬೆದರಿಕೆಗಳಿಂದ ರಕ್ಷಿಸಲ್ಪಟ್ಟಿದೆ. ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿದ್ದು, ಬಿಆರ್‌ಒ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿರುವುದು ಸಂತಸ ತಂದಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿ ತಮ್ಮ ಯೋಜನೆಗಳ ಮೂಲಕ ದೇಶದ ಭದ್ರತಾ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನ ನಿರ್ಣಾಯಕ ಪಾತ್ರವನ್ನು ಸಚಿವರು ಎತ್ತಿ ತೋರಿಸಿದರು.
ಇತ್ತೀಚೆಗೆ ನಮ್ಮ ಪಡೆಗಳು ಉತ್ತರ ವಲಯದಲ್ಲಿ ಎದುರಾಳಿಗಳನ್ನು ಪರಿಣಾಮಕಾರಿಯಾಗಿ ಎದುರಿಸಿವೆ. ಪರಿಸ್ಥಿತಿಯನ್ನು ಶೌರ್ಯ ಮತ್ತು ತ್ವರಿತವಾಗಿ ನಿಭಾಯಿಸಿವೆ. ಈ ಪ್ರದೇಶದಲ್ಲಿ ಸಾಕಷ್ಟು ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಇದು ಸಾಧ್ಯವಾಯಿತು. ಇದು ದೂರದ ಪ್ರದೇಶಗಳ ಪ್ರಗತಿಗೆ ನಮ್ಮನ್ನು ಇನ್ನಷ್ಟು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.