ಶಿಕ್ಷಣ ಇಲಾಖೆ: ಬೋಧಕೇತರರ ವರ್ಗಕ್ಕೆ ನಿಯಮ

ಬೆಂಗಳೂರು: ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಗಳ ವಿವಿಧ ಕಚೇರಿಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚಿನ ಅವಧಿ ಒಂದೇ ಸ್ಥಳದಲ್ಲಿರುವ ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಹೊಸ ನಿಯಮಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ.
ಇತ್ತೀಚೆಗೆ ಪತ್ತೆಯಾದ ಶಿಕ್ಷಕರ ನೇಮಕಾತಿ ಅಕ್ರಮ ಹಾಗೂ ಕೆಲವು ಯೋಜನೆಗಳು ಸಮರ್ಪಕವಾಗಿ ಕಾರ್ಯಗತವಾಗದೇ ಇರಲು ಒಂದೇ ಸ್ಥಳದಲ್ಲಿ ಬಹಳ ವರ್ಷ ಇರುವ ನೌಕರರೇ ಕಾರಣ ಎನ್ನುವುದನ್ನು ಗುರುತಿಸಿರುವ ಇಲಾಖೆಯು ಇಂತಹದೊಂದು ಉಪಕ್ರಮಕ್ಕೆ ನಿರ್ಧರಿಸಿದೆ.
2012-13, 2015, 2017 ಮತ್ತು 2018ರಲ್ಲಿ ಕೆಲವರು ಅಕ್ರಮವಾಗಿ ಶಿಕ್ಷಕರ ಹುದ್ದೆ ಪಡೆಯುವಲ್ಲಿ ಒಂದೇ ಸ್ಥಳದಲ್ಲಿರುವ ಅಧಿಕಾರಿ, ಸಿಬ್ಬಂದಿಯ ಪಾತ್ರವಿರುವುದು ಸಿಐಡಿ ತನಿಖೆಯಿಂದ ದೃಢಪಟ್ಟಿತ್ತು. ಇಂತಹ ಅಕ್ರಮ ಮತ್ತೆ ಮರುಕಳಿಸುವುದನ್ನು ತಪ್ಪಿಸುವ ಉದ್ದೇಶವು ಇಲಾಖೆಯದ್ದಾಗಿದೆ.
ಇಲಾಖೆಯ ಆಡಳಿತದಲ್ಲಿ ಸುಧಾರಣೆ ತರಲು ಬೋಧಕೇತರ ಸಿಬ್ಬಂದಿಯ ವರ್ಗಾವಣೆಗೆ ಹೊಸ ನಿಯಮ ರೂಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವ ಬಿ.ಸಿ.ನಾಗೇಶ್ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು.
ಉದ್ದೇಶಿತ ಹೊಸ ನಿಯಮದ ಅನ್ವಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬೋಧಕೇತರ ಅಧಿಕಾರಿ, ಸಿಬ್ಬಂದಿ 5 ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯನಿರ್ವಹಿಸುವಂತಿಲ್ಲ. ಒಂದು ಹುದ್ದೆಯಿಂದ ಪದೋನ್ನತಿ ಹೊಂದಿದ್ದರೆ ಒಟ್ಟು ಅವಧಿ 8 ವರ್ಷ ಮೀರುವಂತಿಲ್ಲ. ಅವರ ಒಟ್ಟಾರೆ ಸೇವಾವಧಿಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ್ದ ಕಚೇರಿಗೆ ಮತ್ತೆಂದೂ ನಿಯೋಜನೆ ಮೇರೆಗೂ ಹೋಗುವಂತಿಲ್ಲ.
ಗ್ರೂಪ್ 'ಡಿ', ಬೆರಳಚ್ಚು ಸಹಾಯಕರು, ಶೀಘ್ರಲಿಪಿಕಾರರು,ದ್ವಿತೀಯದರ್ಜೆ ಸಹಾಯಕರು, ಪ್ರಥಮದರ್ಜೆ ಸಹಾಯಕರನ್ನು
ಶಾಲಾ-ಕಾಲೇಜುಗಳಿಗೆ ವರ್ಗಾಯಿಸುವುದು, ಅಧೀಕ್ಷಕರು, ಪತ್ರಾಂಕಿತ ವ್ಯವಸ್ಥಾಪಕರು, ಪತ್ರಾಂಕಿತ ಸಹಾಯಕರನ್ನು ಬೇರೆ ತಾಲ್ಲೂಕು, ಜಿಲ್ಲೆಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ವರ್ಗಾವಣೆ ಮಾಡುವಾಗ ಅಂಗವಿಕಲರು, ವಿಧವೆಯರಿಗೆ ಸ್ಥಳ ನಿಯುಕ್ತಿಯಲ್ಲಿ ಆದ್ಯತೆ ನೀಡಲು ಸಮ್ಮತಿಸಲಾಗಿದೆ.
ಶಿಕ್ಷಣ ಇಲಾಖೆಯ ಆಯುಕ್ತರು, ಹೆಚ್ಚುವರಿ ಆಯುಕ್ತರು, ನಿರ್ದೇಶಕರು, ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಒಂದೇ ವಿಷಯದ ನಿರ್ವಹಣೆ ಮಾಡುವಂತಿಲ್ಲ. ಐದು ವರ್ಷದ ಅವಧಿ ಮುಗಿದ ಎಲ್ಲರನ್ನೂ ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕಡ್ಡಾಯವಾಗಿ ವರ್ಗಾವಣೆ ಮಾಡಲು ಹಾಗೂ ಈಗಾಗಲೇ ಶಾಲೆ, ಕಾಲೇಜುಗಳಲ್ಲಿ ಕೆಲಸ ಮಾಡಿದವರನ್ನು ಉನ್ನತ ಕಚೇರಿಗಳಿಗೆ ನಿಯೋಜಿಸಲು ನಿಯಮ ರೂಪಿಸಲಾಗಿದೆ.
ಆಯಕಟ್ಟಿನ ಹುದ್ದೆಗಾಗಿ ಲಾಬಿ
ಲೋಕಾಯುಕ್ತ, ಇಲಾಖಾ ವಿಚಾರಣೆ ಸೇರಿದಂತೆ ವಿವಿಧ ಆರೋಪಗಳಿದ್ದ 33 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸರ್ಕಾರ ಈಚೆಗೆ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವರ್ಗಾಯಿಸಿತ್ತು.
ಅವರಲ್ಲಿ ಕೆಲವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದು ಅದೇ ಹುದ್ದೆಗಳಲ್ಲೇ ಮುಂದುವರಿದಿದ್ದಾರೆ. ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು, ಸಿಬ್ಬಂದಿಯನ್ನು ಮಾತೃ ಇಲಾಖೆಗೆ ಮರಳಿ ಕರೆಸಿಕೊಳ್ಳಲು ಆದೇಶ ಹೊರಡಿಸಿದ್ದರೂ, ಹೆಚ್ಚಿನವರು ರಾಜಕೀಯ ಒತ್ತಡ ಹಾಗೂ ಪ್ರಭಾವವನ್ನು ಬಳಸಿ ಅಲ್ಲೇ ಉಳಿದುಕೊಂಡಿದ್ದಾರೆ ಎಂದು ಇಲಾಖೆಯ ಮೂಲಗಳು ಹೇಳಿವೆ.