ಮೇಕೆದಾಟು ಯೋಜನೆ: ಪಾದಯಾತ್ರೆ ಯಶಸ್ಸಿಗೆ ಕಾವೇರಿ ಉಗಮ ಸ್ಥಳದಲ್ಲಿ ಡಿಕೆಶಿ ಪೂಜೆ
ತಲಕಾವೇರಿ (ಕೊಡಗು ಜಿಲ್ಲೆ): ಮೇಕೆದಾಟು ಯೋಜನೆ ಕಾರ್ಯಗತಕ್ಕೆ ಆಗ್ರಹಿಸಿ, ಜ.9ರಂದು ಅಣೆಕಟ್ಟು ಯೋಜನೆಯ ಪ್ರದೇಶದಿಂದ ಬೆಂಗಳೂರು ತನಕ ಪಾದಯಾತ್ರೆ ಆಯೋಜಿಸಿದ್ದು, ಅದರ ಯಶಸ್ಸಿಗೆ ಕೋರಿ ಶುಕ್ರವಾರ ತಲಕಾವೇರಿ ಕ್ಷೇತ್ರದಲ್ಲಿ ಕೆಪಿಸಿಸಿಯಿಂದ ವಿಶೇಷ ಪೂಜೆ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿದರೂ ಪವಿತ್ರ ಕೊಳದ ಬಳಿಗೆ ಆಗಮಿಸಲಿಲ್ಲ. ಅಧ್ಯಕ್ಷರ ಪರವಾಗಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಕಾವೇರಿ ಉಗಮ ಸ್ಥಳವಾದ ಪವಿತ್ರ ಕುಂಡಿಕೆಯ ಬಳಿ ಪೂಜೆ ಸಲ್ಲಿಸಿದರು.
ಡಿ.ಕೆ.ಶಿವಕುಮಾರ ಅವರ ಹತ್ತಿರದ ಸಂಬಂಧಿಯೊಬ್ಬರು ಈಚೆಗೆ ಮೃತಪಟ್ಟಿದ್ದು ಸೂತಕ ಕಾರಣಕ್ಕೆ ಅವರು ಪೂಜೆ ಸಲ್ಲಿಸಲಿಲ್ಲ. ಸ್ನಾನಕೊಳದ ಮೆಟ್ಟಿಲು ಬಳಿಯೇ ಕುಳಿತು ಮಹಾಸಂಕಲ್ಪ ಪೂಜೆ ವೀಕ್ಷಿಸಿದರು.
ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಯುವ ಘಟಕದ ಅಧ್ಯಕ್ಷ ಮಿಥುನ್‌ಗೌಡ, ಮಾಜಿ ಸಚಿವೆ ಸುಮಾ ವಸಂತ್, ಮಂಥರ್‌ಗೌಡ ಹಾಜರಿದ್ದರು.