ತಲ್ಲಣ ಸೃಷ್ಟಿಸಿದ ಭವಾನಿ ಬಯಕೆಯ ಬಿರುಗಾಳಿ
, ಹಾಸನ: ಎಚ್.ಡಿ.ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿ ರುವುದು ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಇಕ್ಕಟ್ಟು ಸೃಷ್ಟಿಸಿದೆ. ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿಯನ್ನು ಪ್ರಕಟಿಸುವ ಮುನ್ನವೇ ಭವಾನಿ ರೇವಣ್ಣ ಅವರು ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವುದು ಗೌಡರ ಕುಟುಂಬದೊಳಗೆ ಅಸಮಾಧಾನದ ಬಿರುಗಾಳಿ ಯನ್ನೇ ಸೃಷ್ಟಿಸಬಹುದು.
ಈ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಅವರ ಪುತ್ರ ಎಚ್.ಪಿ.ಸ್ವರೂಪ್ ಅವರೂ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಸ್ವರೂಪ್ ಅವರು ಕ್ಷೇತ್ರದಲ್ಲಿ ಸುತ್ತಾಡುತ್ತಾ ಚುನಾವಣ ಸಿದ್ಧತೆಯಲ್ಲಿದ್ದಾರೆ. ಆದರೆ ರೇವಣ್ಣ ಅವರ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಸ್ವರೂಪ್ ಅವರಲ್ಲಿ ಭವಾನಿ ರೇವಣ್ಣ ಅವರ ಬಯಕೆಯ ಬಿರುಗಾಳಿಯು ತಲ್ಲಣ ಸೃಷ್ಟಿಸಿದೆ.
ಜೆಡಿಎಸ್ ಟಿಕೆಟ್‌ಗಾಗಿ ಭವಾನಿ ಹಾಗೂ ಸ್ವರೂಪ್ ಅವರ ನಡುವಿನ ಟಿಕೆಟ್ ಪೈಪೋಟಿ ಕಳೆದ 6 ತಿಂಗಳಿನಿಂದಲೂ ಇತ್ತು. ಈಗ ಆ ಪೈಪೋಟಿ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಹಾಸನ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂಬುದು ಗೌಡರ ಕುಟುಂಬದ ಹಾಗೂ ಜೆಡಿಎಸ್ ಕಾರ್ಯಕರ್ತರ ಪರಮೋತ್ಛ ಗುರಿ. ಆದರೆ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಸ್ವರೂಪ್ ನಡುವಿನ ಪೈಪೋಟಿ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ.
ಎಚ್.ಎಸ್.ಪ್ರಕಾಶ್ 4 ಬಾರಿ ಹಾಸನ ಕ್ಷೇತ್ರದ ಶಾಸಕರಾಗಿದ್ದ ವರು. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಹಾಸನ ಜಿಲ್ಲೆಯ ರಾಜಕಾರಣದ ಅಂಬೆಗಾಲಿನ ಶಿಶು ಎಂದೇ ಗುರುತಿಸಿದ್ದ ಪ್ರೀತಂ ಗೌಡರೆದುರು ಸೋತಿದ್ದು ಪ್ರಕಾಶ್ ಮತ್ತು ದೇವೇಗೌಡರ ಕುಟುಂಬಕ್ಕೆ ಸಹಿಸಿಕೊಳ್ಳಲಾಗದ ರಾಜಕೀಯ ಅಘಾತವನ್ನಂಟು ಮಾಡಿತು. ಚುನಾವಣೆ ಮುಗಿದ ಅನಂತರ ಅನಾರೋಗ್ಯಕ್ಕೀಡಾದ ಪ್ರಕಾಶ್ ಅವರು ಚೇತರಿಸಿಕೊಳ್ಳಲಾಗದೆ ಇಹಲೋಕ ತ್ಯಜಿಸಿದರು. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಸೇಡು ತೀರಿಸಿಕೊಳ್ಳುವ ತವಕ ದೇವೇಗೌಡರು ಹಾಗೂ ಪ್ರಕಾಶ್ ಕುಟುಂಬಗಳಲ್ಲೂ ಇದೆ. ಆದರೆ ಅದಕ್ಕಾಗಿ ಒಗ್ಗಟ್ಟಿನ ಕಾರ್ಯತಂತ್ರ ರೂಪಿಸಬೇಕಾದ ಹೊತ್ತಿನಲ್ಲಿ ಟಿಕೆಟ್‌ಗಾಗಿ ಎರಡೂ ಕುಟುಂಬಗಳ ನಡುವೆ ಟಿಕೆಟ್‌ಗಾಗಿ ಪೈಪೋಟಿ ಎದುರಾಗಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಕೆ.ಆರ್.ನಗರ ಅಥವಾ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದ ಭವಾನಿ ರೇವಣ್ಣ ಅವರು ಈ ಬಾರಿ ಶತಾಯಗ ತಾಯ ಸ್ಪರ್ಧೆಗಿಳಿಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಸ್ವಯಂ ಘೋಷಣೆಯನ್ನೂ ಮಾಡಿಕೊಂಡಿದ್ದಾರೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಒಳ ರಾಜಕೀ ಯದ ಸುಳಿಗಳನ್ನು ಅರಿತಿರುವ ದೇವೇ ಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.