ಹಾಸನಾಂಭ ದರ್ಶನಕ್ಕೆ ಇಂದು ತೆರೆ

ಹಾಸನಾಂಭ ದರ್ಶನಕ್ಕೆ ಇಂದು ತೆರೆ

ಹಾಸನ, ಅ.27- ಹನ್ನೆರಡು ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ನಗರದ ಅಧಿದೇವತೆ ಹಾಸನಾಂಬೆ ದೇಗುಲದ ಬಾಗಿಲನ್ನು ಇಂದು ಮಧ್ಯಾಹ್ನ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಮುಚ್ಚಲಾಯಿತು.

ದೀಪಾವಳಿ ಸಂದರ್ಭದಲ್ಲಿ ಹಾಸನಾಂಬ ದೇವಾಲಯದ ಬಾಗಿಲು ತೆರೆದಿದ್ದು, ಈ ಬಾರಿ 12 ದಿನಗಳ ಕಾಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯ ಸೇರಿದಂತೆ ಹೊರರಾಜ್ಯ ಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದರು.

ಕೊನೆಯ ದಿನವಾದ ನಿನ್ನೆ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಕೊಂಡೋತ್ಸವ ಕೂಡ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಮ್‍ಗೌಡ, ಜಿಲ್ಲಾಧಿಕಾರಿ ಸೇರಿದಂತೆ ಹಲವಾರು ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಾಲಯದ ಬಾಗಿಲು ಮುಚ್ಚಲಾಯಿತು.

ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ದೇವರ ಮುಂದೆ ದೀಪ ಹಚ್ಚಿ ನೈವೇದ್ಯವಿಟ್ಟು ಬಾಗಿಲನ್ನು ಮುಚ್ಚಲಾಯಿತು. ಗರ್ಭಗುಡಿ ಬಾಗಿಲನ್ನು ಅ.13 ರಿಂದ 27ರ ವರೆಗೆ ತೆರೆದಿದ್ದು, 15 ದಿನಗಳಲ್ಲಿ 12 ದಿನಗಳು ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಟಿಕೆಟ್ ಮಾರಾಟ ಹಾಗೂ ಪ್ರಸಾದ ಮಾರಾಟದಿಂದ ಸುಮಾರು 2 ಕೋಟಿ ಆದಾಯ ಸಂಗ್ರಹವನ್ನು ಅಂದಾಜಿಸಲಾಗಿದೆ. ಇನ್ನು ಹುಂಡಿ ಕಾಣಿಕೆಯಿಂದ ಹೆಚ್ಚು ಆದಾಯ ಸಂಗ್ರಹವಾಗಿದೆ. ಸಚಿವ ಗೋಪಾಲಯ್ಯ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದೊಂದಿಗೆ ಜಿಲ್ಲಾಡಳಿತ ಭಕ್ತರಿಗೆ ದೇವರ ದರ್ಶನಕ್ಕಾಗಿ ಉತ್ತಮ ಅವಕಾಶ ಕಲ್ಪಿಸಿತ್ತು. ರಾಜ್ಯದೆಲ್ಲೆಡೆ ಸುಭಿಕ್ಷೆ ನೆಲೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು.

ಶಾಸಕ ಪ್ರೀತಮ್‍ಗೌಡ ಮಾತನಾಡಿ, ಈ ಬಾರಿ ದೇವಿಯ ದರ್ಶನ ಸುಸೂತ್ರವಾಗಿ ನಡೆದಿದೆ. ದೇವಾಲಯದ ಆವರಣದಲ್ಲಿರುವ ಅರ್ಚಕರ ಮನೆಯನ್ನು ಜಿಲ್ಲಾಡಳಿತ ಅಥವಾ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಮಾತುಕತೆ ನಡೆಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ತಿಳಿಸಿದರು. 

6 ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನ: ಕೋವಿಡ್‍ನಿಂದ ಕಳೆದ ವರ್ಷ ದೇವಿಯ ದರ್ಶನಕ್ಕೆ ಮುಕ್ತ ಅವಕಾಶವಿರಲಿಲ್ಲ. ಈ ಬಾರಿ ಮುಕ್ತ ಅವಕಾಶ ದೊರೆತ ಹಿನ್ನೆಲೆಯಲ್ಲಿ ಗಣ್ಯ ವ್ಯಕ್ತಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಎಎಸ್‍ಪಿ ತಮ್ಮಯ್ಯ, ಉಪ ವಿಭಾಗಾಕಾರಿ ಜಗದೀಶ್, ಡಿವೈಎಸ್‍ಪಿ ಉದಯ್‍ಭಾಸ್ಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.