ರೈತರ ಜಮೀನುಗಳಿಗೆ ಬೈಕ್‌ನಲ್ಲೇ ತೆರಳಿ ಬೆಳೆ ಹಾನಿ ಮಾಹಿತಿ ಪಡೆದ ಎಚ್‌.ಡಿ. ರೇವಣ್ಣ

ರೈತರ ಜಮೀನುಗಳಿಗೆ ಬೈಕ್‌ನಲ್ಲೇ ತೆರಳಿ ಬೆಳೆ ಹಾನಿ ಮಾಹಿತಿ ಪಡೆದ ಎಚ್‌.ಡಿ. ರೇವಣ್ಣ

ಹಾಸನ, ನವೆಂಬರ್ 29: ಕಳೆದ ಕೆಲವು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿದ್ದು, ಜಮೀನುಗಳಿಗೆ ರೈತರ ಬೈಕ್‌ನಲ್ಲೇ ತೆರಳಿದ ಮಾಜಿ ಸಚಿವ ಹಾಗೂ ಶಾಸಕ ಎಚ್.‌ಡಿ. ರೇವಣ್ಣ, ಬೆಳೆ ಹಾನಿ ಪ್ರದೇಶ ವೀಕ್ಷಿಸಿ, ಮಾಹಿತಿ ಪಡೆದರು.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಭಾನುವಾರ ಭೇಟಿ ನೀಡಿದ ರೇವಣ್ಣ, ಮಳೆಯಿಂದ ಬೆಳೆಹಾನಿ ಆಗಿರುವ ಪ್ರದೇಶಗಳನ್ನು ವೀಕ್ಷಿಸಿದರು. ಈ ವೇಳೆ ತಮ್ಮ ಕಾರು ಬಿಟ್ಟು ರೈತರ ಬೈಕ್ ಏರಿದ ಎಚ್‌.ಡಿ. ರೇವಣ್ಣ, ರೈತರ ಜಮೀನಿಗೆ ತೆರಳಿ ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಹಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ರಾಗಿ, ಜೋಳ, ಭತ್ತ, ಶುಂಠಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿದ್ದು, ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಹಾಸನದ ಹೊಳೆನರಸೀಪುರದ ಹಲವು ಹಳ್ಳಿಗಳಲ್ಲಿ ಬೈಕ್‌ನಲ್ಲಿ ಸುತ್ತುತ್ತಾ ಮಳೆಯಿಂದ ಹಾನಿಗೊಳಗಾದ ರೈತರ ಬೆಳೆ ವೀಕ್ಷಿಸಿದ ನಂತರ ಮಾತನಾಡಿದ ರೇವಣ್ಣ, "ಕಳೆದ ಒಂದು ತಿಂಗಳಲ್ಲಿ ಹೊಳೆನರಸೀಪುರದಲ್ಲಿ ಭಾರೀ ಮಳೆಯಾಗಿ, 40 ಸಾವಿರ ಎಕರೆ ಪ್ರದೇಶದಲ್ಲಿ ರಾಜಮುಡಿ ಭತ್ತ ನಾಶವಾಗಿದೆ. ಬಾಳೆ, ಶುಂಠಿ ಸೇರಿದಂತೆ ಯಾವ ಬೆಳೆಯೂ ಉಳಿದಿಲ್ಲ," ಎಂದರು.

"ಸರ್ಕಾರ ಪ್ರತಿ ಎಕರೆಗೆ ಕನಿಷ್ಟ 15 ಸಾವಿರ ರೂಪಾಯಿ ಪರಿಹಾರ ನೀಡಬೇಕು. ನಮ್ಮ ತಾಲ್ಲೂಕಿನಲ್ಲೇ ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ. ಕೂಡಲೇ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಸರ್ಕಾರ ಸುಮ್ಮನೆ ಮಾಧ್ಯಮದಲ್ಲಿ ಮಾತನಾಡುತ್ತ ಕೂರಬಾರದು. ಮನೆ ಬಿದ್ದವರಿಗೂ ಹಣ ನೀಡಿಲ್ಲ. ಕೂಡಲೇ ಸರ್ಕಾರ ಸಮರೋಪಾದಿಯಲ್ಲಿ ಹಣ ಬಿಡುಗಡೆ ಮಾಡಬೇಕು," ಎಂದು ಆಗ್ರಹಿಸಿದರು. ಕೂಡಲೇ ಪರಿಹಾರ ನೀಡಿ ತಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಸರ್ಕಾರಕ್ಕೆ ರೈತರು ಇದೇ ವೇಳೆ ಮನವಿ ಮಾಡಿದರು.

ರ ಸಭೆ ಕರೆಯಲಿ"ಕೋವಿಡ್ ಮೂರನೇ ಅಲೆ ವಕ್ಕರಿಸುವ ಸಂಭವವಿದ್ದು, ರಾಜ್ಯ ಸರ್ಕಾರ ಕೂಡಲೇ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಬೇಕು," ಎಂದು ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್‌.ಡಿ. ರೇವಣ್ಣ ಆಗ್ರಹಿಸಿದ್ದಾರೆ.

ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, "ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಕೊರೊನಾ ಸಂಬಂಧ ಸಭೆ ನಡೆಸಿದ್ದಾರೆ. ಹೊಸ ಅಲೆ ಬರುತ್ತಿರುವ ಬಗ್ಗೆ ಸರ್ಕಾರ ಕೂಡಲೇ ಎಚ್ಚರಿಕೆ ವಹಿಸಬೇಕಿದೆ. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗೆ ಏನು ಮೆಡಿಸಿನ್ ಬೇಕು ಎಂಬುದನ್ನು ಗಮನ ಹರಿಸಬೇಕು. ಸುಮ್ಮನೆ ಕೊನೆ ಘಳಿಗೆಯಲ್ಲಿ ಇದರ ಬಗ್ಗೆ ಓಡಾಡಬಾರದು," ಎಂದರು.

"ಕೆಲವು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಯಂತ್ರಗಳು ಕೆಲಸ ಮಾಡಲ್ಲ, ಇದರ ಬಗ್ಗೆ ಗಮನಹರಿಸಿ. ಕೋವಿಡ್ ಮೂರನೇ ಅಲೆ ಬಗ್ಗೆ ಎಚ್ಚರ ವಹಿಸಬೇಕು. ಜಿಲ್ಲಾಮಟ್ಟದಲ್ಲಿ ಶಾಸಕರ ಸಭೆ ಕರೆದು ಏನು ಕ್ರಮಕೈಗೊಳ್ಳಬೇಕು ಎಂಬುದನ್ನು ಚರ್ಚಿಸಬೇಕು. ವೈದ್ಯರು ಮತ್ತು ನರ್ಸ್‌ಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು," ಎಂದು ಒತ್ತಾಯಿಸಿದರು.

ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ಭಾಗದಲ್ಲಿ ಕೇರಳ ಗಡಿ ಹತ್ತಿರವಿದೆ. ಅದನ್ನೆಲ್ಲ ಸರ್ಕಾರ ಬಿಗಿ ಮಾಡಬೇಕು ಎಂದು ಎಚ್.ಡಿ. ರೇವಣ್ಣ ಸರ್ಕಾರಕ್ಕೆ ಕಿವಿಮಾತು ಹೇಳಿದರು.