ಕೊರೊನಾದಿಂದ ಮೃತಪಟ್ಟ ಶವಗಳನ್ನು 15 ತಿಂಗಳ ಬಳಿಕ ಹೊರ ತೆಗೆದ ಆಸ್ಪತ್ರೆ ಸಿಬ್ಬಂದಿ

ಬೆಂಗಳೂರು: ಮಹಾಮಾರಿ ಕೊರೊನಾ ತನ್ನ ಮೊದಲನೆ ಅಲೆ ಹಾಗೂ ಎರಡನೇ ಅಲೆಯ ವೇಳೆ ಜನರಿಗೆ ನರಕ ದರ್ಶನ ಮಾಡಿಸಿದೆ. ಈ ನಡುವೆ ಸಂಬಂಧಿಕರೇ ತಮ್ಮವರ ಮೃತ ಶವಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮವರು ಸೋಂಕಿತ ಮೃತ ಶವದಿಂದ ತಮಗೆ ಕೊರೊನಾ ತಗುಲಬಹುದೆಂಬ ಭಯ ಹೆಚ್ಚಾಗಿತ್ತು.
ಕೊರೊನಾದಂತಹ ಸಮಯದಲ್ಲೂ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಶವಾಗಾರದಲ್ಲಿ ಕೊರೊನಾ ಸೋಂಕಿತರಿಬ್ಬರ ಶವಗಳನ್ನಿಟ್ಟು ಸಿಬ್ಬಂದಿ ಮರೆತಿದ್ದು 15 ತಿಂಗಳ ಬಳಿಕ ಎರಡು ಶವಗಳನ್ನು ಹೊರಕ್ಕೆ ತರಲಾಗಿದೆ. 2020ರ ಜುಲೈನಲ್ಲಿ ಕೊರೊನಾ ಸೋಂಕಿನಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದವರನ್ನು ಶವಗಾರದಲ್ಲಿ ಇಡಲಾಗಿತ್ತು. ಆದರೆ ಆ ಶವಗಳಿಗೆ ಅಂದೇ ಮುಕ್ತಿ ಕೊಡದೆ ಮರೆತಿದ್ದಾರೆ. ಸದ್ಯ 15 ತಿಂಗಳ ಬಳಿಕ ಶವಗಳನ್ನು ಎರಡು ದಿನಗಳ ಹಿಂದೆ ಹೊರಕ್ಕೆ ತೆಗೆಯಲಾಗಿದೆ. ಚಾಮರಾಜಪೇಟೆಯ ದುರ್ಗಾ(40) ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು (35) ಮೃತರು. ಮರಣೋತ್ತರ ಪರೀಕ್ಷೆಗೆ ಎರಡು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಹಿಂದೆ ಬಿಬಿಎಂಪಿಯೇ ಕೋವಿಡ್ ಶವಗಳನ್ನ ಅಂತ್ಯಸಂಸ್ಕಾರ ಮಾಡುತ್ತಿದ್ದ ಕಾರಣ ಮೃತ ದೇಹಗಳ ಬಗ್ಗೆ ಕುಟುಂಬಸ್ಥರು ಕೂಡ ತಲೆಕೆಡಿಸಿಕೊಂಡಿಲ್ಲ. ಆದರೆ ಹೊಸ ಶವಾಗಾರ ನಿರ್ಮಾಣದ ಬಳಿಕ ಹಳೆ ಶವಾಗಾರದ ಬಳಕೆ ನಿಲ್ಲಿಸಿದ್ದ ಸಿಬ್ಬಂದಿ ಹಳೆ ಕಟ್ಟಡದಲ್ಲಿ ಎರಡು ಶವಗಳನ್ನ ಇಟ್ಟಿರುವುದನ್ನೇ ಮರೆತಿದ್ದರು. ನಿನ್ನೆ ಹಳೆ ಶವಾಗಾರ ಸ್ವಚ್ಛತೆಗೆ ಹೋದಾಗ ದುರ್ನಾತ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಶವಗಳನ್ನು ಶವಾಗಾರದ ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿತ್ತು ಮತ್ತು ಈ ಮಧ್ಯೆ ಹೊಸ ಶವಾಗಾರದ ಕಟ್ಟಡವನ್ನು ಬಳಸಲು ಪ್ರಾರಂಭಿಸಲಾಗಿತ್ತು. ಹೀಗಾಗಿ ಮರೆತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ಸಿಬ್ಬಂದಿ ಹಳೆಯ ಶವಾಗಾರವನ್ನು ಸ್ವಚ್ಛಗೊಳಿಸಲು ಹೋದಾಗ, ಇಲ್ಲಿ ಕೆಟ್ಟ ಕೊಳೆತ ದುರ್ವಾಸನೆ ಬಂದ ಅನುಭವವಾಗಿದೆ ನಂತರ ಈ ಎರಡು ದೇಹಗಳನ್ನು ಪತ್ತೆಹಚ್ಚಿದರು ಎಂದು ಹೇಳಿದರು.
ಸದ್ಯ ಈಗ ಆಫ್ರಿಕಾ ದೇಶಗಳಲ್ಲಿ ಹರಡುತ್ತಿರೋ ಒಮಿಕ್ರಾನ್ ಅನ್ನೋ ಕ್ರಿಮಿ ಎಲ್ಲಿ ಭಾರತಕ್ಕೂ ಕಾಲಿಟ್ಟು ಜೀವ ಹಿಂಡುತ್ತೋ ಅನ್ನೋ ಭೀತಿ ಶುರುವಾಗಿದೆ. ತಜ್ಞರು ಬೇರೆ ಇದು ಭಾರಿ ಡೇಂಜರಸ್ ವೈರಸ್ ಅಂದಿರೋದು ಇನ್ನೂ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಈಗಾಗ್ಲೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅಲರ್ಟ್ ಮಾಡಲಾಗಿದೆ.
ಹೌದು..ತಜ್ಞರು ಈ ಹಿಂದೆಯೇ ಡಿಸೆಂಬರ್ನಲ್ಲಿ ಕೊರೊನಾ 3ನೇ ಅಲೆ ವಕ್ಕರಿಸಬಹುದು ಅನ್ನೋ ಅಚ್ಚರಿಕೆಯ ಗಂಟೆ ಬಾರಿಸಿದ್ರು. ಕಳೆದ ಕೆಲ ದಿನಗಳಲ್ಲಿ ನಡೀತಿರೋ ಬೆಳವಣಿಗೆಗಳನ್ನ ನೋಡಿದ್ರೆ ಅದ್ಯಾಕೊ ಕೊರೊನಾ ಮತ್ತೆ ಕಣ್ಣು ಬಿಡ್ತಿದ್ಯಾ ಅನ್ನೋ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಕೊರೊನಾ ಕೇಸ್ಗಳ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗ್ತಿದೆ. ಸಾಲದ್ದಕ್ಕೆ ಈ ಒಮಿಕ್ರಾನ್ ಅನ್ನೋ ಕ್ರಿಮಿಯ ಹುಟ್ಟು ಬೇರೆ. ಹೀಗಾಗಿ ಡಿಸೆಂಬರ್ ತಿಂಗಳು ಕಂಟಕವಾಗುತ್ತಾ ಅನ್ನೋ ಅನುಮಾನ ಕಾಡ್ತಿದೆ.
ಇನ್ನು ಕರ್ನಾಟಕಕ್ಕೆ ಡಿಸೆಂಬರ್ ಡಬಲ್ ಡೇಂಜರ್ ಆಗೋ ಭೀತಿ ಇದೆ. ಆಫ್ರಿಕಾದಿಂದ ಬಂದವರಲ್ಲಿ ಯಾರಿಗಾದ್ರೂ ಒಮಿಕ್ರಾನ್ ತಗುಲಿದ್ರೆ ಅಷ್ಟೇ ಕಥೆ. ರಾಜ್ಯದ ಜನರು ನಿದ್ದೆಗೆಡಿಸೋದು ಗ್ಯಾರಂಟಿ. ಹೀಗಾಗಿಯೇ ಸರ್ಕಾರ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ತಿದೆ. ಕರುನಾಡು ಮೂರನೇ ಅಲೆಗೆ, ಒಮಿಕ್ರಾನ್ ದಾಳಿಗೆ ತುತ್ತಾಗದಂತೆ ಎಚ್ಚರಿಕೆ ವಹಿಸಲೇಬೇಕಾದ ಅನಿವಾರ್ಯತೆ ಇದೆ.