ಮತ್ತೊಂದು ಮನೆ ಕುಸಿತ, ಪ್ರಾಣಾಪಾಯದಿಂದ ಪಾರಾದ ಕುಟುಂಬ

ಬೆಂಗಳೂರು, ನ.19- ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದಲ್ಲಿ ಮತ್ತೊಂದು ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆಯಲ್ಲಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ದವಸ-ಧಾನ್ಯ, ಎಲೆಕ್ಟ್ರಾನಿಕ್ ಉಪಕರಣಗಳು, ಮತ್ತಿತರ ವಸ್ತುಗಳು ಸಂಪೂರ್ಣ ನಾಶವಾಗಿದ್ದು, ಶಂಕರ್ ಕುಟುಂಬ ಬೀದಿಗೆ ಬಂದಿದೆ. 50 ವರ್ಷದ ಮನೆ ಶಿಥಿಲಗೊಂಡಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಶಂಕರ್ ಅವರಿಗೆ ಮನೆ ಖಾಲಿ ಮಾಡಿ ಬೇರೆಡೆ ವಾಸಿಸುವಂತೆ ಸಲಹೆ ನೀಡಿದ್ದರೂ ಅವರು ತಲೆ ಕೆಡಿಸಿಕೊಂಡಿರಲಿಲ್ಲ.
ನಿನ್ನೆ ಮಣ್ಣು ಕುಸಿತ ಹೆಚ್ಚಾದ ಹಿನ್ನೆಲೆಯಲ್ಲಿ ಹಿಂಭಾಗದ ಮನೆಯಲ್ಲಿ ನಿದ್ರಿಸಲು ತೆರಳಿದ್ದರಿಂದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.
ಬಿಬಿಎಂಪಿ ನಡೆಸಿರುವ ಶಿಥಿಲ ಕಟ್ಟಡಗಳ ವರದಿಯಲ್ಲೂ ಈ ಮನೆಯನ್ನು ಶಿಥಿಲಾವಸ್ಥೆ ಮನೆ ಎಂದು ಗುರುತಿಸಲಾಗಿತ್ತು. ಕಟ್ಟಡ ಕುಸಿದ ಪರಿಣಾಮ ಮನೆ ಪಕ್ಕ ನಿಲ್ಲಿಸಿದ್ದ ಮೂರು ಬೈಕ್‍ಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಕುಸಿದು ಬಿದ್ದಿರುವ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಕ್ಕಪಕ್ಕದ ಎರಡು ಮನೆಗಳು ಶಿಥಿಲಗೊಂಡಿರುವುದನ್ನು ಮನಗಂಡ ಆಯುಕ್ತರು ಆ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.
ಕೊಳಚೆ ನೀರಿನ ಸಿಂಚನ: ಸತತ ಮಳೆಯಿಂದಾಗಿ ನಾಯಂಡಹಳ್ಳಿ ಅಂಡರ್‍ಪಾಸ್ ನೀರಿನಿಂದ ತುಂಬಿ ಹೋಗಿದ್ದು, ವಾಹನ ಸವಾರರಿಗೆ ಕೊಳಚೆ ನೀರಿನ ಸಿಂಚನವಾಗುತ್ತಿದೆ. 207 ಮೀಟರ್ ಉದ್ದದ ಅಂಡರ್‍ಪಾಸ್‍ಅನ್ನು 11 ವರ್ಷಗಳ ಹಿಂದೆ ಬಿಡಿಎ 89 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಬಿಬಿಎಂಪಿ ನಿರ್ವಹಣೆಗೆ ವಹಿಸಿತ್ತು. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಅಂಡರ್‍ಪಾಸ್ ಕಳಪೆ ಕಾಮಗಾರಿಯಿಂದಾಗಿ ಈ ಸೇತುವೆ ಕೆಳಭಾಗದಲ್ಲಿ ಸಂಚರಿಸುವವರಿಗೆ ಮೇಲಿನಿಂದ ಕೊಳಚೆ ನೀರಿನ ಸಿಂಚನವಾಗುತ್ತಿದೆ.
ಹೆಣ್ಣೂರು ಕ್ರಾಸ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿಯ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಆಳುದ್ದ ನೀರಿನಲ್ಲೇ ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಛಲವಾದಿ ಪಾಳ್ಯ, ನಂದಿನಿ ಬಡಾವಣೆ, ಕಂಠೀರವ ನಗರ, ಆರ್‍ಆರ್ ನಗರ, ದಾಸರಹಳ್ಳಿ, ಬಸವನಪುರ, ಸೀಗೆಹಳ್ಳಿ ಸರ್ಕಲ್, ವರಮಾವು, ಟಿಸಿ ಪಾಳ್ಯ, ಯಲಹಂಕ ಮತ್ತಿತರ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಷ್ಟು ನೀರು ನಿಂತಿತ್ತು.ಮಲ್ಲಸಂದ್ರ ಕೆರೆ ತುಂಬಿ ಹರಿದ ಪರಿಣಾಮ ಸುತ್ತಮುತ್ತಲ ಕೆಲ ಮನೆಗಳಿಗೆ ನೀರು ನುಗ್ಗಿತು.
ಹಲವಾರು ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದಿದ್ದು, ಬಿಬಿಎಂಪಿ ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಸಮಸ್ಯೆ ಬಗೆಹರಿಸುವ ಕಾರ್ಯದಲ್ಲಿ ನಿರತರಾಗಿದ್ದರು.