ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ

ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ

ಡಿಜಿಟಲ್ ವಹಿವಾಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ. ಪ್ರತಿ ವಹಿವಾಟು ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಘೋಷಣೆ ಮಾಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ನಿರ್ವಹಿಸುವ ಐಎಂಪಿಎಸ್ ಒಂದು ಪ್ರಮುಖ ಪಾವತಿ ವ್ಯವಸ್ಥೆಯಾಗಿದೆ. ಇದು ದೇಶೀಯ ಹಣವನ್ನು ತ್ವರಿತಗತಿಯಲ್ಲಿ ವರ್ಗಾವಣೆ ಮಾಡಲು ನೆರವಾಗುತ್ತದೆ.

ಆರ್ಬಿಐ, ಎರಡು ತಿಂಗಳಿಗೊಮ್ಮೆ ವಿತ್ತೀಯ ನೀತಿ ಪರಿಶೀಲನೆ ನಡೆಸುತ್ತದೆ. ವಿತ್ತೀಯ ನೀತಿ ಪರಿಶೀಲನೆ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಐಎಂಪಿಎಸ್ ವ್ಯವಸ್ಥೆಯ ಪ್ರಾಮುಖ್ಯತೆ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಪ್ರತಿ ವಹಿವಾಟು ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.

ಇದು ಡಿಜಿಟಲ್ ಪಾವತಿಯನ್ನು ಮತ್ತಷ್ಟು ಉತ್ತೇಜಿಸಲಿದೆ. ಗ್ರಾಹಕರು 2 ಲಕ್ಷಕ್ಕಿಂತ ಹೆಚ್ಚಿನ ಡಿಜಿಟಲ್ ಪಾವತಿಯನ್ನು ಇದ್ರಿಂದ ಸುಲಭವಾಗಿ ಮಾಡಬಹುದಾಗಿದೆ. ಇದಲ್ಲದೆ, ದೇಶಾದ್ಯಂತ ಆಫ್‌ಲೈನ್ ಮೋಡ್‌ನಲ್ಲಿ ರಿಟೇಲ್ ಡಿಜಿಟಲ್ ಪಾವತಿ ಪರಿಚಯಿಸಲು ಆರ್ಬಿಐ ಮುಂದಾಗಿದೆ.

ಪ್ರಾಯೋಗಿಕ ಪ್ರಯೋಗದ ವೇಳೆ ಉತ್ತಮ ಪ್ರೋತ್ಸಾಹ ಸಿಕ್ಕಿದ್ದು, ದೇಶಾದ್ಯಂತ ಆಫ್‌ಲೈನ್ ಮೋಡ್ ಮೂಲಕ ಚಿಲ್ಲರೆ ಡಿಜಿಟಲ್ ಪಾವತಿ ಪರಿಚಯಿಸಲು ಮುಂದಾಗಿದ್ದೇವೆ. ಇದು ಡಿಜಿಟಲ್ ಪಾವತಿಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹೊಸ ವ್ಯವಹಾರಕ್ಕೆ ಉತ್ತೇಜನ ನೀಡಲಿದೆ ಎಂದವರು ಹೇಳಿದ್ದಾರೆ.