ಬೆಂಗಳೂರಿನ 8 ಜನರಲ್ಲಿ ಕಪ್ಪ ವೈರಸ್ ಪತ್ತೆ

ಬೆಂಗಳೂರಿನ 8 ಜನರಲ್ಲಿ ಕಪ್ಪ ವೈರಸ್ ಪತ್ತೆ

ಬೆಂಗಳೂರು, ಆ.12- ಬೆಂಗಳೂರಿನಲ್ಲಿ ಕೊರೊನಾ ರೂಪಾಂತರಿ ಕಪ್ಪ ಸೋಂಕು ಎಂಟು ಮಂದಿಯಲ್ಲಿ ಪತ್ತೆಯಾಗಿದ್ದು, ರಾಜ್ಯಸರ್ಕಾರ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿ ಪ್ರಸ್ತುತ ಡೆಲ್ಟಾ, ಡೆಲ್ಟಾ ಪ್ಲಸ್, ಕಪ್ಪ, ಬೀಟಾ ಸೋಂಕುಗಳು ಪತ್ತೆಯಾಗುತ್ತಿವೆ. ಈ ಮೊದಲು ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ಎರಡು, ಬೊಮ್ಮನಹಳ್ಳಿ ಮತ್ತು ಮೈಸೂರಿನಲ್ಲಿ ತಲಾ ಒಂದೊಂದು ಸೇರಿ ನಾಲ್ಕು ಡೆಲ್ಟಾ ಪ್ಲಸ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ಅನಂತರ ಅವು ಕಂಡುಬಂದಿಲ್ಲ.

ಈಗ ಕಪ್ಪ ಸೋಂಕು ಕಾಣಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ 192 ಮಂದಿ ಗಂಟಲು ದ್ರವವನ್ನು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್‍ಗೆ ಕಳುಹಿಸಲಾಗಿದ್ದು, ಅದರಲ್ಲಿ 148 ಮಂದಿಯಲ್ಲಿ ಡೆಲ್ಟಾ ತಳಿ ಪತ್ತೆಯಾಗಿದ್ದು, ಎಂಟು ಜನರಲ್ಲಿ ಕಪ್ಪ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅವರು ಕಪ್ಪ ವೈರಸ್ ಅಷ್ಟೇನು ಅಪಾಯಕಾರಿ ಎಂದು ಹೇಳಿಲ್ಲ.

ಈವರೆಗಿನ ಮಾರ್ಗಸೂಚಿಗಳ ಪ್ರಕಾರ ಡೆಲ್ಟಾ ಪ್ಲಸ್ ಹೆಚ್ಚು ವೇಗವಾಗಿ ಹರಡುತ್ತದೆ. ಅದರ ಮೇಲೆ ತೀವ್ರ ನಿಗಾ ವಹಿಸಬೇಕು ಎಂಬ ಸೂಚನೆಗಳಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ದೇವಸ್ಥಾನಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲಾಗುತ್ತಿದೆ. ಅಪಾರ್ಟ್‍ಮೆಂಟ್ ಸೇರಿದಂತೆ ಇತರ ಕಡೆಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆಯೂ ಸುತ್ತೋಲೆ ರವಾನಿಸಲಾಗುತ್ತಿದೆ ಎಂದು ಹೇಳಿದರು.

ಕಳೆದ 10 ದಿನಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಕೊರೊನಾ ನಿಯಂತ್ರಣದಲ್ಲಿದೆ. ಕಳೆದ ಜುಲೈನಲ್ಲಿ ಶೇ.12ರಷ್ಟು ಮಕ್ಕಳಿಗೆ ಸೋಂಕು ತಗುಲಿತ್ತು. ಆಗಸ್ಟ್ ಮೊದಲ ವಾರದಲ್ಲಿ ಸುಮಾರು ಶೇ.13ರಷ್ಟು ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ ಶೇ.5ಕ್ಕಿಂತಲೂ ಕಡಿಮೆ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಹಳಷ್ಟು ಮಂದಿಗೆ ರೋಗ ಲಕ್ಷಣಗಳಿಲ್ಲ. ಚಿಕಿತ್ಸೆ ಪಡೆಯದೆಯೂ ಗುಣಮುಖರಾಗುತ್ತಿದ್ದಾರೆ. ಆದಾಗ್ಯೂ ಬಿಬಿಎಂಪಿ ಎಚ್ಚರಿಕೆ ವಹಿಸಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳು, ಮರಣದ ಪ್ರಮಾಣ, ಸೋಂಕು ಹರಡುವಿಕೆ ಮೇಲೆ ತೀವ್ರ ನಿಗಾ ವಹಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜೆಜೆಆರ್ ಆಸ್ಪತ್ರೆಯಲ್ಲಿ 30 ಬೆಡ್‍ಗಳನ್ನು ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದಲ್ಲಿ 10 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ.

10 ಮಂದಿ ಮಕ್ಕಳ ತಜ್ಞರನ್ನು ನಿಯೋಜಿಸಲಾಗಿದ್ದು, ವೈದ್ಯರುಗಳಿಗೆ ಮಕ್ಕಳ ಚಿಕಿತ್ಸೆಗೆ ತರಬೇತಿ ಕೊಡಿಸಲಾಗಿದೆ. ಭಾರತೀಯ ಮಕ್ಕಳ ತಜ್ಞ ವೈದ್ಯರ ಸಂಸ್ಥೆಯೊಂದಿಗೂ ಮೈತ್ರಿ ಮಾಡಿಕೊಳ್ಳಲಾಗಿದೆ. ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದ್ದೇವೆ ಎಂದು ಹೇಳಿದರು.ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಆದರೆ, ಮೇಲ್ನೋಟಕ್ಕೆ ತಂದೆ-ತಾಯಿಗಳಿಂದಲೇ ಸೋಂಕು ಹರಡುವ ಸಾಧ್ಯತೆ ಕಂಡುಬರುತ್ತಿದೆ.

12 ರಿಂದ 18 ವರ್ಷದೊಳಗಿನ ಮಕ್ಕಳು ಹೊರಗೆ ಓಡಾಡುವ ಪ್ರಮಾಣ ಹೆಚ್ಚಿದ್ದು, ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಇರುವುದು ಸಾಮಾನ್ಯವಾಗುತ್ತಿದೆ. ಹೀಗಾಗಿ ಪೆÇೀಷಕರು ಅವರ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು. ಬೆಂಗಳೂರಿನಲ್ಲಿ ಈವರೆಗೆ ಸುಮಾರು 505 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 246 ಗಂಡುಮಕ್ಕಳಿದ್ದಾರೆ ಎಂದು ಅವರು ವಿವರಿಸಿದರು.