ಶೂಟಿಂಗ್ ಸೆಟ್ನಲ್ಲೇ ನೇಣು ಹಾಕಿಕೊಂಡು ಪ್ರಾಣ ಕಳ್ಕೊಂಡ ನಟಿ!
ಮುಂಬೈ: ದೇಶದಲ್ಲಿ ಇತ್ತೀಚೆಗೆ ಅಪಘಾತ, ಹೃದಯಾಘಾತ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಈ ಮೂರು ಕಾರಣಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ದಿನವೂ ಭಾರಿ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಇದೀಗ ನಟಿಯೊಬ್ಬಳು ತನ್ನ ಶೂಟಿಂಗ್ ಸೆಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಾಲಿವ್ ಎಂಬಲ್ಲಿನ ಶೂಟಿಂಗ್ ಸೆಟ್ನಲ್ಲಿ ಈ ಪ್ರಕರಣ ನಡೆದಿದೆ. ಕಿರುತೆರೆ ನಟಿ ತುನಿಷಾ ಶರ್ಮಾ (20) ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ತಾನು ನಟಿಸುತ್ತಿದ್ದ ಕಿರುತೆರೆಯ ಶೂಟಿಂಗ್ ಸೆಟ್ನಲ್ಲೇ ನೇಣು ಹಾಕಿಕೊಂಡಿದ್ದಳು. ಸ್ಥಳದಲ್ಲಿದ್ದವರು ಕೂಡಲೇ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅದಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಘಟನೆಯಿಂದ ಸೆಟ್ನಲ್ಲಿದ್ದವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ನಟಿಯ ಶವವನ್ನು ನೋಡಿ ಬೆಚ್ಚಿಬಿದ್ದಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬಿತ್ಯಾದಿ ಸಂಗತಿಗಳು ಇನ್ನಷ್ಟೇ ಖಚಿತವಾಗಿ ತಿಳಿಯಬೇಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.
ಚಕ್ರವರ್ತಿನ್ ಅಶೋಕ್ ಸಾಮ್ರಾಟ್, ಗಬ್ಬರ್ ಪೂಂಚ್ವಾಲಾ, ಶೇರ್ ಇ ಪಂಜಾಬ್ ಮುಂತಾದ ಧಾರಾವಾಹಿಗಳಲ್ಲಿ ಈಕೆ ನಟಿಸಿದ್ದಳು. ಫಿತೂರ್, ಬಾರ್ ಬಾರ್ ದೇಖೋ, ಕಹಾನಿ 2: ದುರ್ಗಾ ರಾಣಿ ಸಿಂಗ್, ದಬಾಂಗ್ 3 ಮುಂತಾದ ಸಿನಿಮಾಗಳಲ್ಲೂ ಈಕೆ ಅಭಿನಯಿಸಿದ್ದಳು.