ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಗೆ ₹90 ಲಕ್ಷ ಕಮಿಷನ್: ದೂರು ನೀಡಲು ನಿರ್ಧಾರ
ಚಿತ್ರದುರ್ಗ: ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಮೂರು ವರ್ಷದಲ್ಲಿ ₹ 90 ಲಕ್ಷ ಲಂಚ ನೀಡಿರುವುದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಗುತ್ತಿಗೆದಾರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ತಿಳಿಸಿದರು.
ವಕೀಲರೊಬ್ಬರ ನೆರವು ಪಡೆದು ದೂರು ದಾಖಲಿಸುವ ಪ್ರಕ್ರಿಯೆ ಆರಂಭ ಮಾಡಿದ್ದೇವೆ. ದಾಖಲೆ, ಅಫಿದವಿತ್ ಸೇರಿ ಹಲವು ಮಾಹಿತಿ ದೂರಿನ ಜೊತೆ ನೀಡಲಾಗುತ್ತಿದೆ. ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೂ ತರಲಾಗಿದೆ'' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
'ರಾಜ್ಯದ 14 ಶಾಸಕರು ಹಾಗೂ ಮೂವರು ಸಚಿವರ ಲಂಚಕ್ಕೆ ಸಂಬಂಧಿಸಿದ ದಾಖಲೆಗಳು ಸಂಘದ ಬಳಿ ಇವೆ. ತಿಪ್ಪಾರೆಡ್ಡಿ ಪ್ರಕರಣವನ್ನು ಪರೀಕ್ಷಾರ್ಥವಾಗಿ ಲೋಕಾಯುಕ್ತಕ್ಕೆ ನೀಡಲಾಗುತ್ತಿದೆ. ತನಿಖೆಯ ಪ್ರಗತಿಯನ್ನು ನೋಡಿಕೊಂಡು ಉಳಿದ ದೂರುಗಳನ್ನು ನೀಡಲಾಗುವುದು' ಎಂದರು.
'ಶಾಸಕರು ಹಾಗೂ ಸಚಿವರ ಲಂಚಾವತಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆದಾರ ಸಂಘದ ನಿಯೋಗ ಪ್ರಧಾನಿ ಮೋದಿ ಅವರ ಬಳಿಗೆ ತೆರಳಲು ಕಾಲಾವಕಾಶ ಕೋರಲಾಗುವುದು. ಅವರ ಬಳಿಯೂ ನ್ಯಾಯ ಸಿಗದೇ ಇದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು. ಸರ್ಕಾರವೇ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಿದರೆ ಎಲ್ಲ ದಾಖಲೆಗಳನ್ನು ನೀಡಲಾಗುವುದು' ಎಂದು ಹೇಳಿದರು.
'ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಹಳ್ಳ ಹಿಡಿಸಿದ್ದಾರೆ. ಪಾಟೀಲ್ ಸಾವಿಗೆ ಕೆ.ಎಸ್.ಈಶ್ವರಪ್ಪ ಅವರೇ ಕಾರಣರಾದರೂ ಪೊಲೀಸರು ಅವರನ್ನು ಬಂಧಿಸಲಿಲ್ಲ. ಆದರೆ, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಬಂಧಿಸಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ' ಎಂದು ದೂರಿದರು.
'ಐದು ವರ್ಷಗಳ ಹಿಂದೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇಷ್ಟು ಲಂಚ ಪಡೆಯುತ್ತಿರಲಿಲ್ಲ. ಇತ್ತೀಚಿನ ಕೆಲ ವರ್ಷಗಳಲ್ಲಿ ಲಂಚದ ಮಿತಿ ಮೀರಿದೆ. ಜಿಲ್ಲೆಯ ಇತರ ಕ್ಷೇತ್ರದಲ್ಲಿ ಲಂಚ, ಕಮಿಷನ್ ಹಾವಳಿ ಇದೆ. ಸಚಿವ ಬಿ.ಶ್ರೀರಾಮುಲು ಸೇರಿ ಉಳಿದ ಎಲ್ಲರೂ ಪರವಾಗಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.