ಅನಧಿಕೃತವಾಗಿ 1.5 ಕೋಟಿ ಸಾಲ ನೀಡಿದ ಮ್ಯಾನೇಜರ್ ಬಂಧನ

ಅನಧಿಕೃತವಾಗಿ 1.5 ಕೋಟಿ ಸಾಲ ನೀಡಿದ ಮ್ಯಾನೇಜರ್ ಬಂಧನ

ಕೇಂದ್ರಪಾರಾ (ಒಡಿಶಾ), ಜು.10- ಅನಧಿಕೃತವಾಗಿ ಸಾಲ ನೀಡಿ ಬ್ಯಾಂಕ್‍ಗೆ ಸುಮಾರು 1.5 ಕೋಟಿ ನಷ್ಟ ಉಂಟುಮಾಡಿದ್ದ ಕೆನರಾ ಬ್ಯಾಂಕ್‍ನ ಮಾಜಿ ಮ್ಯಾನೇಜರ್‍ನನ್ನು ಬಂಧಿಸಲಾಗಿದೆ. ಮನಮೋಹನ್ ಮೊಹೋರ್ತಿ ಬಂಧಿತ ಮಾಜಿ ಅಧಿಕಾರಿಯಾಗಿದ್ದು, ಒಡಿಶಾದ ಕಟಕ್‍ನಲ್ಲಿರುವ ಕೆನರಾ ಬ್ಯಾಂಕ್‍ನಲ್ಲಿ ಈತ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ಕಳೆದ 2016ರಲ್ಲಿ ಇವರು ಅನಧಿಕೃತವಾಗಿ ಸುಮಾರು 14 ಮಂದಿ ಬ್ಯಾಂಕ್ ಗ್ರಾಹಕರ ಖಾತೆಗಳ ಹೆಸರಿನಲ್ಲಿ ನಕಲಿ ದಾಖಲೆಗಳು ಮತ್ತು ಚೆಕ್‍ಗಳನ್ನು ನೀಡಿ ಸುಮಾರು 1.5 ಕೋಟಿಗೂ ಹೆಚ್ಚು ಸಾಲ ನೀಡಿದ್ದರು. ರಾಷ್ಟ್ರೀಯ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಪ್ರತಿವರ್ಷ ದಾಖಲೆಗಳ ಪರಿಶೀಲನೆ ವೇಳೆ ಕಟಕ್ ಶಾಖೆಯಲ್ಲಿ ಹಣಕಾಸು ವ್ಯತ್ಯಾಸ ಇರುವುದು ಗೊತ್ತಾಗಿತ್ತು.

ಈ ಬಗ್ಗೆ ವಿಚಾರಿಸಿದಾಗ ಆಗ ಮ್ಯಾನೇಜರ್ ಆಗಿದ್ದ ಮನಮೋಹನ್ ಮೊಹೋರ್ತಿ ಅವರು ಸರಿಯಾದ ಲೆಕ್ಕ ಕೊಡಲಿಲ್ಲ. ಈ ಸಂಬಂಧ ಅವರನ್ನು ಸಸ್ಪೆಂಡ್ ಮಾಡಿ ದೂರು ನೀಡಲಾಗಿತ್ತು. ತನಿಖೆ ನಡೆಸಿದಾಗ 2018ರಲ್ಲಿ ಹಣಕಾಸು ಅವ್ಯವಹಾರ ನಡೆದಿರುವುದು ಪತ್ತೆಯಾಗಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಸಾಲ ಪಡೆದಿದ್ದ ಸ್ಥಳೀಯ ಉದ್ಯಮಿಯೊಬ್ಬರು ತನ್ನ ಖಾತೆಯಿಂದ 13 ಲಕ್ಷವನ್ನು ವಿತ್‍ಡ್ರಾ ಮಾಡಲಾಗಿದೆ ಎಂದು ತಿಳಿಸಿದಾಗ ಇದೇ ರೀತಿ ಇನ್ನೂ 13 ಮಂದಿಗೆ ಅವರಿಗೆ ತಿಳಿಯದೆ ಹಣವನ್ನು ದೋಚಲಾಗಿದೆ ಎಂಬುದು ಗೊತ್ತಾಗಿದೆ. ನಿನ್ನೆ ರಾತ್ರಿ ಸೀಹದ್ ನಗರ್ ಪೊಲೀಸರು ಮನಮೋಹನ್ ಮೊಹೋರ್ತಿ ಅವರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.