ಪೊಲೀಸ್ ಸಿಬ್ಬಂದಿ ಸೌಲಭ್ಯ ಹೆಚ್ಚಳಕ್ಕೆ ಒತ್ತಾಯ
ಶಿವಮೊಗ್ಗ: ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ರಾಜ್ಯ ನಾಗರಿಕರ ರಕ್ಷಣಾ ಸಮಿತಿ ಕಾರ್ಯಕರ್ತರು ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿದರು.
ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅನನ್ಯ. ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಪೊಲೀಸ್ ಸಿಬ್ಬಂದಿಯ ಮಕ್ಕಳ ವಿವಾಹ ಕಾರ್ಯಕ್ರಮಗಳಿಗೆ ಅನುಕೂಲ ವಾಗುವಂತೆ ರಾಜ್ಯದಲ್ಲಿ ಪೊಲೀಸ್ ಕಲ್ಯಾಣ ಮಂಟಪಗಳನ್ನು ಸ್ಥಾಪಿಸಬೇಕು. ಖಾಸಗಿ ಕಲ್ಯಾಣ ಮಂಟಪಗಳ ಬಾಡಿಗೆ ತುಂಬಾ ಹೆಚ್ಚಾಗಿದೆ. ಬರುವ ವೇತನದಲ್ಲಿ ಪೊಲೀಸರು ಮಕ್ಕಳ ಮದುವೆ, ಶುಭ ಸಮಾರಂಭ ಮಾಡುವುದೇ ಕಷ್ಟವಾಗಿದೆ. ಕಲ್ಯಾಣ ಮಂಟಪ ದೊರೆತರೆ ಅನುಕೂಲವಾಗುತ್ತದೆ ಎಂದರು.
ಬಂದೋಬಸ್ತ್ ಕಾರ್ಯದಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಕೂರಲು ಆಸನಗಳು ಇರುವುದಿಲ್ಲ. ಬಂದೋಬಸ್ತ್ ಸಮಯದಲ್ಲಿ ಸಂಚಾರಿ ಟಾಯ್ಲೆಟ್ ನಿರ್ಮಿಸಿಕೊಡಬೇಕು ಎಂದು ಕೋರಿದರು.
ನಾಗರಿಕ ರಕ್ಷಣಾ ಸಮಿತಿಯ ಅಧ್ಯಕ್ಷ ಶೇಖರ್, ಮಹಿಳಾ ಅಧ್ಯಕ್ಷೆ ಉಷಾ ಉತ್ತಪ್ಪ, ಪದಾಧಿಕಾರಿಗಳಾದ ಆರ್.ರಾಘವೇಂದ್ರ, ವಿನೋದ್ ಮನವಿ ಸಲ್ಲಿಸಿದರು.