ಉಜ್ಜಯಿನಿಯಲ್ಲಿ ಮಹಾಕಾಲ ಲೋಕ ಇಂದು ಉದ್ಘಾಟನೆ; ಮೊದಲ ಹಂತದಲ್ಲಿ 900 ಮೀ. ಕಾರಿಡಾರ್ ಅಭಿವೃದ್ಧಿ

ಉಜ್ಜಯಿನಿಯಲ್ಲಿ ಮಹಾಕಾಲ ಲೋಕ ಇಂದು ಉದ್ಘಾಟನೆ; ಮೊದಲ ಹಂತದಲ್ಲಿ 900 ಮೀ. ಕಾರಿಡಾರ್ ಅಭಿವೃದ್ಧಿ

ವದೆಹಲಿ: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯ ಕಾರಿಡಾರ್ ಅಭಿವೃದ್ಧಿ ಭಾಗವಾದ 'ಶ್ರೀ ಮಹಾಕಾಲ ಲೋಕ'ದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಲಿದ್ದಾರೆ. ಇದು 856 ಕೋಟಿ ರೂಪಾಯಿ ವೆಚ್ಚದ 900 ಮೀಟರ್​ನ ಯೋಜನೆಯಾಗಿದೆ.

ಈ ಯೋಜನೆಯಲ್ಲಿ ಎರಡು ಭವ್ಯ ಹೆಬ್ಬಾಗಿಲುಗಳು, ಮರಳುಗಲ್ಲಿನಲ್ಲಿ ಕೆತ್ತಿದ ಸಾಲಂಕೃತ ಕಂಬಗಳಿಂದ ಮಾಡಿದ ಕಂಬಸಾಲುಗಳು, ನಯನಮನೋಹರ ಕಾರಂಜಿಗಳು, ಶಿವಪುರಾಣದ ಕಥೆಗಳನ್ನು ಬಿಂಬಿಸುವ ಭಿತ್ತಿಚಿತ್ರ, 108 ಶಿವತಾಂಡವದ ಚಿತ್ರವಿರುವ ಸ್ತಂಭ ಮೊದಲಾದವು ಪ್ರಮುಖ ಆಕರ್ಷಣೆ ಆಗಿದೆ. ಮುಂದಿನ ಹಂತದಲ್ಲಿ ಸೃಷ್ಟಿ, ಗಣೇಶನ ಹುಟ್ಟು, ಸತಿ ಮತ್ತು ದಕ್ಷ ಮುಂತಾದವರ ಕಥೆಗಳನ್ನೂ ಚಿತ್ರಿಸಲು ಯೋಜಿಸಲಾಗಿದೆ.

ಎರಡು ಹಂತಗಳು: ಎರಡು ಹಂತಗಳಲ್ಲಿ ಮಹಾಕಾಲ ಲೋಕ ಯೋಜನೆ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಜಾಗತಿಕ ಮಟ್ಟದ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿ ಯಾತ್ರಿಗಳ ಅನುಭವವನ್ನು ಹೆಚ್ಚಿಸುವುದು ಇದರ ಗುರಿಯಾಗಿದೆ. ದೇವಸ್ಥಾನ ಸಂಕೀರ್ಣವನ್ನು ಏಳು ಪಟ್ಟು ಹಿಗ್ಗಿಸಲಾಗುತ್ತದೆ. ಪ್ರಸ್ತುತ ವರ್ಷಕ್ಕೆ ಸುಮಾರು 1.5 ಕೋಟಿ ಜನರು ಇಲ್ಲಿಗೆ ಭೇಟಿ ಕೊಡುತ್ತಿದ್ದು ಅದನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ.

ಪವಿತ್ರ ಕ್ಷೇತ್ರ

ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಮಹಾಕಾಲೇಶ್ವರ ದೇಗುಲವು ಭೂಮಿ ಮೇಲಿನ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದೆಂದು ನಂಬಲಾಗಿದೆ. ಮಹಾಕಾಲೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸ ಮತ್ತು ಮಹಾಶಿವರಾತ್ರಿಯಂದು ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಸಿಂಹಸ್ಥ ಕುಂಭ ಮೇಳ ನಡೆಯುತ್ತದೆ. ಹಿಂದಿನ ಕುಂಭಮೇಳವು 2016ರಲ್ಲಿ ನಡೆದಿತ್ತು.