ಆಪ್ ಸಚಿವನ ರಾಜೀನಾಮೆ ಹಿಂದೆ ಕೇಜ್ರಿವಾಲ್ ರಾಜಕೀಯ ತಂತ್ರ?

ಆಪ್ ಸಚಿವನ ರಾಜೀನಾಮೆ ಹಿಂದೆ ಕೇಜ್ರಿವಾಲ್ ರಾಜಕೀಯ ತಂತ್ರ?

ವದೆಹಲಿ: ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ರಾಜೀನಾಮೆ ನೀಡಿರುವುದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಲೆಕ್ಕಾಚಾರದ ಪ್ರಕಾರವೇ ನಡೆದದ್ದು ಎಂಬ ಕುತೂಹಲಕರ ಮಾಹಿತಿ ಹೊರಬಿದ್ದಿದೆ.

ಆಪ್ ನಾಯಕ ರಾಜೇಂದ್ರ ಪಾಲ್ ಕಳೆದ ವಾರ ಬೌದ್ಧ ಧರ್ಮಕ್ಕೆ ದಲಿತರ ಮತಾಂತರ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಲ್ಲಿ ಹಿಂದು ದೇವರುಗಳನ್ನು ನಂಬಬಾರದು ಮತ್ತು ಪೂಜಿಸಬಾರದು ಎಂದು ಪ್ರಮಾಣ ಮಾಡಿಸಲಾಗಿತ್ತು. ಅದನ್ನು ಬೆಂಬಲಿಸಿ ರಾಜೇಂದ್ರ ಪಾಲ್ ಹೇಳಿಕೆ ನೀಡಿದ್ದು ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿತ್ತು. ನಂತರ ಒತ್ತಡಕ್ಕೆ ಮಣಿದು ರಾಜೇಂದ್ರ ಪಾಲ್ ರಾಜೀನಾಮೆ ನೀಡಿದ್ದರು. ರಾಜೇಂದ್ರ ಪಾಲ್ರಿಂದ ರಾಜೀನಾಮೆ ಪಡೆದಿದ್ದು ಆಪ್ ಜಾತಿ ರಾಜಕೀಯ ಮಾಡುವುದಿಲ್ಲ ಎಂಬ ಸಂದೇಶ ರವಾನಿಸಲು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ರಾಷ್ಟ್ರೀಯ ಪಕ್ಷದ ಸ್ವರೂಪ ಪಡೆಯಲು ಪ್ರಯತ್ನಿಸುತ್ತಿರುವ ಆಪ್‌ಗೆ ಇದು ಒಂದು ಒಳ್ಳೆಯ ಅವಕಾಶವಾಗಿದೆ. 'ದಿಲ್ಲಿಯಲ್ಲಿ ಆಪ್ ಒಳ್ಳೆಯ ಆಡಳಿತ ನೀಡುತ್ತಿದೆ' ಎಂಬ ಭಾವನೆಯನ್ನು ಮುಂಬರುವ ಗುಜರಾತ್ ಚುನಾವಣೆಯ ಸಮಯದಲ್ಲಿ ಮೂಡಿಸಲು ಇದು ಸಹಕಾರಿ ಆಗಲಿದೆ. ಅದಲ್ಲದೇ ಪಂಜಾಬ್ನಲ್ಲಿ ನಡೆಯುತ್ತಿರುವ ಸಾಮೂಹಿಕ ಮತಾಂತರವನ್ನು ವಿರೋಧಿಸುತ್ತಿಲ್ಲ ಎಂಬ ಆರ್.ಎಸ್.ಎಸ್ನ ಆರೋಪವನ್ನು ಇವರು ಅಲ್ಲಗಳೆದಂತಾಗುತ್ತದೆ.

ಹಿಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ಆಪ್ ಗೌರವಿಸುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದ ಬಿಜೆಪಿ ಈಗ ಸುಮ್ಮನೆ ಇರಬೇಕಾಗುತ್ತದೆ. ಆದರೆ ಈ ನಡೆ ಆಪ್ನಿಂದ ದಲಿತರ ಮತಗಳನ್ನು ದೂರ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.