ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ: ಹೊಸ ಅಧ್ಯಕ್ಷರ ಆಯ್ಕೆಗೆ ನಡೆದಿದೆ ಹುಡುಕಾಟ

ಬೆಂಗಳೂರು: ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಲಾಖೆಯ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಾಧಿಕಾರದ ಹೊಣೆಯನ್ನು ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರೇ ವಹಿಸಿಕೊಳ್ಳುತ್ತಿದ್ದು, ಅ.20ರಂದು ಅಧಿಕಾರ ಸ್ವೀಕರಿಸುವರು.
ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರು 3 ವರ್ಷಗಳ ಅಧಿಕಾರವಧಿ ಇದೇ ಅ.15ರಂದು ಪೂರ್ಣಗೊಂಡಿದ್ದು, ಹೊಸಬರು ಆಯ್ಕೆ ಆಗುವವರೆಗೂ ಜಂಟಿ ನಿರ್ದೇಶಕರು ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕಲಾವಿದೆ ಮಾಳವಿಕಾ ಅವಿನಾಶ್ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಹಾಗೆಯೇ ನಿರ್ಗಮಿತ ಅಧ್ಯಕ್ಷ ಟಿ.ಎಸ್.ನಾಗಾಭರಣ ಕೂಡ ಇನ್ನೊಂದು ಅವಧಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ನಾಗಾಭರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿದ್ದು, ಮತ್ತೊಂದು ಅವಕಾಶಕ್ಕೆ ಕೋರಿಕೆ ಇಟ್ಟಿದ್ದಾರೆ. ದೊಡ್ಡರಂಗೇಗೌಡರ ಹೆಸರು ಕಳೆದ ಅವಧಿಯ ಆಯ್ಕೆ ವೇಳೆ ಚಲಾವಣೆಯಲ್ಲಿತ್ತು. ಆದರೆ ಕೊನೆ ಹಂತದಲ್ಲಿ ನಾಗಾಭರಣ ಅವಕಾಶ ಪಡೆದುಕೊಂಡಿದ್ದರು. ಇನ್ನೊಂದೆಡೆ ನಾಗಾಭರಣ ಕೋರಿಕೆಯಂತೆ ಮತ್ತೊಂದು ಅವಕಾಶ ನೀಡಿದರೆ ಉಳಿದ ಅಕಾಡೆಮಿ ಅಧ್ಯಕ್ಷರೂ ಅವಕಾಶ ಕೇಳಬಹುದೆಂಬ ಆಲೋಚನೆಯಲ್ಲಿ ಸರ್ಕಾರವಿದೆ.
ಈ ಮೂರು ಹೆಸರು ಹೊರತು ಅಚ್ಚರಿ ಹೆಸರು ಬರುವ ಸಾಧ್ಯತೆ ಇದೆ. ಪ್ರಾಧಿಕಾರದ ಜತೆಗೆ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ, ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರ ಅವಧಿ ಮುಕ್ತಾಯವಾಗಿದ್ದು, ಹೊಸ ಅಧ್ಯಕ್ಷರ ಆಯ್ಕೆಯಾಗಬೇಕಾಗಿದೆ. ಸಾಹಿತ್ಯ ಅಕಾಡೆಮಿಗೆ ರೋಹಿಣಾಕ್ಷ ಶೀರ್ಲಾಲು, ನಾಟಕ ಅಕಾಡೆಮಿಗೆ ಪ್ರಭುದೇವ ಕಪ್ಪಗಲ್ ಹೆಸರು ಚರ್ಚೆಯಲ್ಲಿದೆ.
ಜಂಟಿ ನಿರ್ದೇಶಕರಿಗೆ ಹೊಣೆ: ಕರ್ನಾಟಕ ನಾಟಕ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ (ಬೆಂಗಳೂರು) ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಬಲವಂತರಾವ್ ಪಾಟೀಲ್ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ (ಮಡಿಕೇರಿ), ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ (ಮಡಿಕೇರಿ),ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ (ಮಂಗಳೂರು), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ( ಮಂಗಳೂರು) ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ (ಮಂಗಳೂರು)ಗೆ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಅಶೋಕ್ ಎನ್. ಚಲವಾದಿ, ಕರ್ನಾಟಕ ಬಯಲಾಟ ಅಕಾಡೆಮಿ (ಬಾಗಲಕೋಟೆ)ಗೆ ಬಸವರಾಜ್ ಹೂಗಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಬನಶಂಕರಿ ವಿ. ಅಂಗಡಿ ಅವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಸಲಹಾ ಸಮಿತಿ ಮುಂದುವರಿಕೆ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಬಿ.ವಿ. ವಸಂತಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಪೊ›. ಆರ್. ಭೀಮಸೇನ್ ಹಾಗೂ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿದ್ದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಸದಸ್ಯರನ್ನಾಗಿ ಮುಂದುವರಿಸಲಾಗಿದೆ.
ವರ್ಷದೊಳಗೆ ನೇಮಕಾತಿ ರದ್ದು: ಪೊ›.ಎಂ.ಎ. ಹೆಗಡೆ ನಿಧನದಿಂದ ತೆರವಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಜನವರಿಯಲ್ಲಿ ಜಿ.ಎಲ್. ಹೆಗಡೆ ಮಣಕಿ ಅವರನ್ನು ನೇಮಕ ಮಾಡಿತ್ತು. ಆದರೆ ವರ್ಷ ಕಳೆಯುವುದರೊಳಗೆಯೇ ಅವರ ಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕಗೊಂಡಿದ್ದಾರೆ. ಆಗಸ್ಟ್ನಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಹುಬ್ಬಳ್ಳಿಯ ಅಜಿತ್ ನಾಗಪ್ಪ ಬಸಾಪುರ ಅವರನ್ನು ನೇಮಕ ಮಾಡಲಾಗಿತ್ತು. ಈ ವೇಳೆ ನಾಟಕ, ಜಾನಪದ ಸೇರಿ ವಿವಿಧ ಅಕಾಡೆಮಿಗಳಿಗೆ ಸದಸ್ಯರನ್ನೂ ನೇಮಿಸ ಲಾಗಿತ್ತು. ಆ ಎಲ್ಲ ನೇಮಕಾತಿಯೂ ಈಗ ರದ್ದಾಗಿವೆ.