ಗೋವಾದಲ್ಲಿ ʻಕನ್ನಡ ಭವನʼ ನಿರ್ಮಾಣಕ್ಕೆ ಕನ್ನಡಿಗರೇ ಸ್ವಂತ ಜಮೀನು ಖರೀದಿಸಲಿ: ಗೋವಾ ಸಿಎಂ ಪ್ರಮೋದ್ ಸಾವಂತ್
ಗೋವಾ: ಗೋವಾದಲ್ಲಿ ಕನ್ನಡ ಭವನ ಮತ್ತು ವಸತಿ ಸೌಕರ್ಯಗಳನ್ನು ನಿರ್ಮಿಸಲು ತಮ್ಮ ಸರ್ಕಾರಕ್ಕೆ ಭೂಮಿಗಾಗಿ ಮನವಿ ಮಾಡುವ ಬದಲು ಸ್ವಂತವಾಗಿ ಭೂಮಿ ಖರೀದಿಸಿ ನಿರ್ಮಿಸಿಕೊಳ್ಳುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕನ್ನಡಿಗರನ್ನು ಒತ್ತಾಯಿಸಿದ್ದಾರೆ.
ಉತ್ತರ ಗೋವಾದ ಬಿಚೋಲಿಮ್‌ನಲ್ಲಿ ಭಾನುವಾರ ಅಖಿಲ ಗೋವಾ ಕನ್ನಡ ಸಂಘ ಆಯೋಜಿಸಿದ್ದ 7ನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದ ಸಾವಂತ್, 'ನಿಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೋವಾದಲ್ಲಿನ ನಿಮ್ಮ (ಕನ್ನಡಿಗರ) ಸಮಸ್ಯೆಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ. ಅವರು ತಮ್ಮ ಬೇಡಿಕೆಯಾದ ಕನ್ನಡ ಭವನ ನಿರ್ಮಾಣದ ಬಗ್ಗೆ ಪುನರುಚ್ಚರಿಸುತ್ತಾರೆ. ಆದರೆ, ನಮ್ಮ ಸರ್ಕಾರದ ಬಳಿ ಜಮೀನಿನ ಕೊರತೆಯಿದೆ. ಹೀಗಾಗಿ, ಕನ್ನಡಿಗರೇ ಜಾಗವನ್ನು ಖರೀದಿಸಿ, ಕನ್ನಡ ಭವನ ನಿರ್ಮಾಣ ಮಾಡಬಹುದು ಎಂದು ಹೇಳಿದ್ದಾರೆ.
ಈ ಹಿಂದೆ, ಕರ್ನಾಟಕ ಸರ್ಕಾರವು ಕರಾವಳಿ ರಾಜ್ಯವಾದ ಗೋವಾದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಸುಮಾರು ಒಂದರಿಂದ ಎರಡು ಎಕರೆ ಆಸ್ತಿಯನ್ನು ಕೋರಿ ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದಿತ್ತು. ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ಸುಮಾರು ನಾಲ್ಕು ದಶಕಗಳಿಂದ ಭವನ ಬೇಕೆಂದು ಆಗ್ರಹಿಸುತ್ತಿದ್ದಾರೆ.
ಕಳೆದ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಮುಖ್ಯಮಂತ್ರಿಗಳು ಗೋವಾದಲ್ಲಿ ಭವನ ಸ್ಥಾಪಿಸಲು ₹10 ಕೋಟಿ ಮೀಸಲಿಟ್ಟಿದ್ದರು ಎಂಬುದು ಗಮನಾರ್ಹ.