ಎರಡೂ ಲಸಿಕೆ ಹಾಕಿಸಿಕೊಂಡವರಿಗೆ ಗೋವಾ ಗೆ ಪ್ರವೇಶ : ಕೋರ್ಟ್ ಅನುಮತಿ
ಪಣಜಿ : ಕೋವಿಡ್ ನ ಎರಡೂ ಲಸಿಕೆ ಹಾಕಿಸಿಕೊಂಡ ಗೋವಾದ ಉದ್ಯೋಗಿಗಳಿಗೆ ಮತ್ತು ಗೋವಾ ನಿವಾಸಿಗಳಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರವಿಲ್ಲದೆಯೇ ನೇರವಾಗಿ ಗೋವಾ ಪ್ರವೇಶಿಸಲು ಬಾಂಬೆ ಹೈಕೋರ್ಟ್ ನ ಗೋವಾ ನ್ಯಾಯಪೀಠ ಅನುಮತಿ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಗಷ್ಟ 5 ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಲಯ ಮುಂದಿನ ನಿರ್ಣಯ ತೆಗೆದುಕೊಳ್ಳಲಿದೆ.
ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ ಉಚ್ಛ ನ್ಯಾಯಾಲಯವು ಮೇ 6 ರಂದು ಗೋವಾ ಪ್ರವೇಶಿಸಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಖಡ್ಡಾಯಗೊಳಿಸಿತ್ತು. ಸದ್ಯ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎರಡೂ ಡೋಸ್ ಲಸಿಕೆ ಪಡೆದವರಿಗೆ ಯಾವುದೇ ನೆಗೆಟಿವ್ ಪ್ರಮಾಣಪತ್ರವಿಲ್ಲದೆಯೇ ಗೋವಾ ಪ್ರವೇಶಿಸಲು ಅವಕಾಶ ಕಲ್ಪಿಸುವಂತೆ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ, ಇಂದು(ಸೋಮವಾರ, ಜುಲೈ 12) ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಂಡಿತ್ತು.
ಎರಡೂ ಲಸಿಕೆ ಹಾಕಿಸಿಕೊಳ್ಳುವುದು ಎಂದರೆ ಫಲಾನುಭವಿಯು ಶಿಫಾರಸ್ಸು ಮಾಡಿದ ಲಸಿಕೆ ವೇಳಾಪಟ್ಟಿಯ ಅಂತಿಮ ಡೋಸ್ ಪಡೆದ ನಂತರ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಾರಗಳು ಕಳೆದಿರಬೇಕು. ಇಂತಹ ವ್ಯಕ್ತಿಯು ಯಾವುದೇ ರೋಗಲಕ್ಷಣ ರಹಿತನಾಗಿರಬೇಕು. ಇಂತವರಿಗೆ ಮಾತ್ರ ಗೋವಾಕ್ಕೆ ಕೋವಿಡ್ ತಪಾಸಣೆಯಿಲ್ಲದೆಯೇ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಬಾಂಬೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ.
ಆಗಷ್ಟ 5 ರ ವರೆಗೆ ಕೋವಿಡ್ ಎರಡೂ ಲಸಿಕೆ ಪಡೆದುಕೊಂಡವರಿಗೆ ಕೋವಿಡ್ ತಪಾಸಣೆಯಿಲ್ಲದೆಯೇ ನೇರವಾಗಿ ಗೋವಾ ಪ್ರವೇಶಿಸಲು ನ್ಯಾಯಾಲಯ ಹೊರಡಿಸಿರುವ ಮಾರ್ಗಸೂಚಿಗಳು ಇಂತಿವೆ:
1). ಕೈಗಾರಿಕೆಗಳು, ನಿರ್ಮಾಣ ಕಾರ್ಯ ಕೈಗೊಳ್ಳುವ ಕಟ್ಟಡ ಕಾರ್ಮಿಕರು, ಉದ್ಯೋಗದ ನಿಮಿತ್ತ ಗೋವಾಕ್ಕೆ ಆಗಮಿಸುವವರು.
2). ವ್ಯವಹಾರದ ಉದ್ದೇಶಗಳಿಗಾಗಿ ಗೋವಾಕ್ಕೆ ಬರುವವರು.
3). ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಗೋವಾದ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡ ಗೋವಾ ನಿವಾಸಿಗಳು, ಕೆಲಸ ಮತ್ತು ವೈದ್ಯಕೀಯ ಕಾರಣಗಳಿಗಾಗಿ ಹೊರ ರಾಜ್ಯಕ್ಕೆ ಪ್ರಯಾಣಿಸುವ ಗೋವಾ ನಿವಾಸಿಗಳು ಕೆಲವು ದಿನಗಳ ನಂತರ ಗೋವಾಕ್ಕೆ ಹಿಂತಿರುಗಬೇಕಾದರೆ.
ಈ ಕಾರಣಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿಯು ಗೋವಾ ರಾಜ್ಯ ಪ್ರವೇಶಿಸಬೇಕಾದರೆ, ಪ್ರವಾಸಿಗರು ಗೋವಾ ಪ್ರವೇಶಿಸಬೇಕಾದರೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಖಡ್ಡಾಯವಾಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ.
ಆದರೆ ಕೋವಿಡ್ ಎರಡೂ ಲಸಿಕೆ ಹಾಕಿಸಿಕೊಂಡ ಪ್ರವಾಸಿಗರಿಗೆ ಗೋವಾ ಪ್ರವೇಶಕ್ಕೆ ಅವಕಾಶ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಆಗಷ್ಟ 5 ರಂದು ಬಾಂಬೆ ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ತಮೂಲಗಳು ತಿಳಿಸಿವೆ.