ಬಾಲಕಿಯರಿಬ್ಬರ ಮೇಲೆ ಗ್ಯಾಂಗ್ರೇಪ್: ರಾತ್ರಿ ಇಡೀ ಮಕ್ಕಳು ಹೊರಗಿದ್ದಾಗ ಮನೆಯವರು ಯಾಕೆ ಸುಮ್ಮನಿದ್ದರು ಎಂದ ಸಿಎಂ!
ಗೋವಾ: ಮೊನ್ನೆಮೊನ್ನೆಯಷ್ಟೇ ಗೋವಾದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದು, ಪೋಷಕರನ್ನೇ ಹೊಣೆಗಾರರನ್ನಾಗಿಸಿ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಅವರ ಈ ಹೇಳಿಕೆ ವಿರುದ್ಧ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ತಡರಾತ್ರಿಯಾದರೂ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಹೊರಗೇ ಇದ್ದರೆ ಪೋಷಕರು ಗಮನಹರಿಸಿ ನಿಗಾ ಇಡಬೇಕು. ಮಕ್ಕಳು ಮಾತು ಕೇಳುವುದಿಲ್ಲ ಎಂದಮಾತ್ರಕ್ಕೆ ಜವಾಬ್ದಾರಿಯನ್ನು ಸರ್ಕಾರ ಅಥವಾ ಪೊಲೀಸರ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಯವರ ಈ ಹೇಳಿಕೆಯನ್ನು ವಿರೋಧ ಪಕ್ಷದವರು ಖಂಡಿಸಿದ್ದಾರೆ. ಗೋವಾ ಫಾರ್ವರ್ಡ್ ಪಾರ್ಟಿ ಎಂಎಲ್ಎ ವಿಜಯ್ ಸರ್ದೇಸಾಯಿ ಮಾತನಾಡಿ, 'ಸಾರ್ವಜನಿಕರ ಸುರಕ್ಷೆ ಸರ್ಕಾರ ಹಾಗೂ ಪೊಲೀಸರ ಜವಾಬ್ದಾರಿ. ಅದನ್ನು ಒದಗಿಸಲು ಆಗುವುದಿಲ್ಲ ಎಂದಾದರೆ ಸಿಎಂ ಆ ಸ್ಥಾನದಲ್ಲಿ ಕುಳಿತುಕೊಳ್ಳಬಾರದು' ಎಂದು ಟೀಕಿಸಿದ್ದಾರೆ. ರಾತ್ರಿಯಲ್ಲಿ ಸಂಚರಿಸಲು ನಾವು ಯಾಕೆ ಹೆದರಬೇಕು? ಕ್ರಿಮಿನಲ್ಗಳು ಜೈಲಲ್ಲಿರಬೇಕು, ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ಓಡಾಡುವಂತಿರಬೇಕು ಎಂದು ಗೋವಾ ಕಾಂಗ್ರೆಸ್ ವಕ್ತಾರ ಅಲ್ಟೋನ್ ಡಿ ಕೋಸ್ತ ಹೇಳಿದ್ದಾರೆ.
ಭಾನುವಾರ ಬೀಚ್ನಲ್ಲಿ ಹತ್ತು ಮಂದಿ ಯುವಕ-ಯುವತಿಯರು ಪಾರ್ಟಿ ಮಾಡಲು ಹೋಗಿದ್ದು, ನಾಲ್ವರೂ ರಾತ್ರಿ ಇಡೀ ಅಲ್ಲೇ ಉಳಿದಿದ್ದರು. ಅವರಲ್ಲಿ ಇಬ್ಬರು ಹುಡುಗಿಯರು. ಅಲ್ಲಿಗೆ ಬಂದ ನಾಲ್ವರು ದುಷ್ಕರ್ಮಿಗಳು ಆ ಹುಡುಗರಿಗೆ ಹೊಡೆದು, ಹುಡುಗಿಯರ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು.