ಮಾಕೋರ್ನಹಳ್ಳಿ ಜಲಾಶಯದ ನೀರಲ್ಲಿ ಕೊಚ್ಚಿಹೋದ ನಾಲ್ವರು! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಮಾಕೋರ್ನಹಳ್ಳಿ ಜಲಾಶಯದ ನೀರಲ್ಲಿ ಕೊಚ್ಚಿಹೋದ ನಾಲ್ವರು! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಕುಣಿಗಲ್​: ಮಾಕೋರ್ನಹಳ್ಳಿ ಜಲಾಶಯದ ನೀರಲ್ಲಿ ಪ್ರವಾಸಿಗರು ಆಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುವಾಗ ನಾಲ್ವರು ನೀರಲ್ಲಿ ಕೊಚ್ಚಿಹೋಗಿದ್ದಾರೆ.

ಕುಣಿಗಲ್​ನ ಕೋಟೆ ಪ್ರದೇಶದ ಒಂದೇ ಕುಟುಂಬದ ಫರ್ವೀನ್​ತಾಜ್​ (23) ಮತ್ತು ಸಾದೀಯ (17), ಯಡಿಯೂರು ಹೋಬಳಿ ಬೀರಗಾನಹಳ್ಳಿಯ ಒಂದೇ ಕುಟುಂಬದ ರಾಜು (23) ಮತ್ತು ಅಪ್ಪು (20) ನೀರಿನಲ್ಲಿ ಕೊಚ್ಚಿ ಹೋದವರು.

ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಡ್ಯಾಂ ತುಂಬಿ ನೀರನ್ನು ಹೊರ ಬಿಡಲಾಗಿದೆ. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಸುತ್ತಮುಲ್ಲ ಊರಿನ ಜನರು ನಿತ್ಯ ಲಗ್ಗೆ ಇಡುತ್ತಿದ್ದಾರೆ. ಅಂತೆಯೇ ನಿನ್ನೆ (ಭಾನುವಾರ) ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.

ಆ ಪೈಕಿ ಕುಣಿಗಲ್​ ಕೋಟೆ ಪ್ರದೇಶದ ಮಹಿಳೆಯರು ಸೇರಿ ಎಂಟು ಮಂದಿ ಹಾಗೂ ಎಡೆಯೂರು ಸಮೀಪದ ಬೀರಗಾನಹಳ್ಳಿಯ ಅಣ್ಣ, ತಮ್ಮ ಇಬ್ಬರು ಬಂದಿದ್ದರು. ಇವರೆಲ್ಲರೂ ತಮ್ಮ ಕುಟುಂಬದವರ ಜತೆ ಡ್ಯಾಂನ ಬಲ ಭಾಗದ ಕೋಡಿ ಹಳ್ಳದ ನೀರಲ್ಲಿ ಆಟವಾಡುತ್ತಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ನೀರಿನ ಹರಿವು ಹೆಚ್ಚಾಗಿದೆ. ಪರಿಣಾಮ, ನಾಲ್ವರೂ ಕೊಚ್ಚಿ ಹೋಗಿದ್ದಾರೆ. ಸ್ಥಳದಲ್ಲಿದ್ದವರು ಅವರನ್ನ ರಕ್ಷಿಸಲು ಮುಂದಾದರೂ ಪ್ರಯೋಜನವಾಗಿಲ್ಲ. ಇದೇ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ 11 ವರ್ಷದ ತಬ್ರೇಜ್​ ಎಂಬಾತನನ್ನು ಕುಟುಂಬಸ್ಥರು ಎಳೆದುಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ.ಎಚ್​.ಡಿ.ರಂಗನಾಥ್​, ಮಾಜಿ ಸಂಸದ ಎಸ್​.ಪಿ. ಮುದ್ದಹನುಮೇಗೌಡ, ತಹಸೀಲ್ದಾರ್​ ಮಹಾಬಲೇಶ್ವರ, ಸಿಪಿಐಗಳಾದ ಡಿ.ಎಲ್​.ರಾಜು, ಗುರುಪ್ರಸಾದ್​, ಹೇಮಾವತಿ ಎಇಇ ಶಿವರಾಜಯ್ಯ ಸ್ಥಳಕ್ಕೆ ದೌಡಾಯಿಸಿದರು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎನ್​.ನರಸಿಂಹಮೂರ್ತಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹದೇವಪ್ಪ ಲಂಗೋಟಿ, ಕುಣಿಗಲ್​ ಅಗ್ನಿಶಾಮಕ ಅಧಿಕಾರಿ ಕೆ.ಸಿ.ಗೋವಿಂದಪ್ಪ ನೇತೃತ್ವದ ಸಿಬ್ಬಂದಿ ಸುಮಾರು ಆರು ಗಂಟೆ ಕಾರ್ಯಾಚರಣೆ ನಡೆಸಿದರೂ ನೀರಲ್ಲಿ ಕೊಚ್ಚಿಕೊಂಡು ಹೋದವರು ಪತ್ತೆಯಾಗಲಿಲ್ಲ, ನೀರಿನ ಹರಿವು ಹೆಚ್ಚಳ ಹಾಗೂ ಕತ್ತಲೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಇಂದು(ಸೋಮವಾರ) ಬೆಳಗ್ಗೆಯಿಂದ ಕಾರ್ಯಾಚರಣೆ ಶುರುವಾಗಿದ್ದು, 9 ಗಂಟೆಯಾದರೂ ಅವರ ಸುಳಿವು ಸಿಕ್ಕಿಲ್ಲ. ಎರಡೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅವರು ಜೀವಂತವಾಗಿ ಸಿಗಲಿ ಎಂದು ಕಣ್ಣೀರಿಡುತ್ತಿದ್ದಾರೆ.