ನರಹಂತಕ ಹುಲಿಯ ಸೆರೆ
ನಾಲ್ವರನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಈ ಪ್ರದೇಶದಲ್ಲಿ ಕಳೆದ 21 ದಿನಗಳಿಂದ ಹುಲಿ ಸೆರೆಗೆ ವಿಶೇಷ ಕಾರ್ಯಚರಣೆ ನಡೆಸಲಾಗಿತ್ತು. ತಮಿಳುನಾಡು ಅರಣ್ಯ ಸಿಬ್ಬಂದಿಗಳು ವಿಜಯ ದಶಮಿ ದಿನವಾದ ಶುಕ್ರವಾರ ಸೆರೆ ಹಿಡಿಯವಲ್ಲಿ ಯಶಸ್ವಿಯಾಗಿದ್ದಾರೆ. ಟಿ. 23 ಎಂದು ಗುರುತಿಸಿರುವ ಹುಲಿಯು ಗೂಡ್ಲೂರು ಬಳಿ ನಾಲ್ವರನ್ನು ಕೊಂದು ಹಾಕಿತ್ತು. ಈ ಹುಲಿಯ ಸೆರೆಗೆ ಬಂಡೀಪುರದಿಂದ ರಾಣಾ ಶ್ವಾನವನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಪತ್ತೆದಾರಿಕೆಯಲ್ಲಿ ಹೆಸರಾದ ರಾಣಾನ ಸಹಾಯದಿಂದ ಹುಲಿ ಸೆರೆಯಾಯಿತು.ಸೆರೆ ಸಿಕ್ಕ ಹುಲಿಯನ್ನು ಮಧು ಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ಆರೈಕೆ ಮಾಡಲು ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕೊಂಡ್ಯೊಯಲಾಗಿದೆ ಎಂದು ತಮಿಳು ನಾಡು ಅರಣ್ಯ ಇಲಾಖೆಯ ಅಧಿಕಾರಿಂದ ಮಾಹಿತಿ ಲಭ್ಯವಾಗಿದೆ.