ಇದೆ 24ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ

ಬೆಂಗಳೂರು,ಸೆ.16- ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆ 24ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಹಿಂದೆ ಸೆ.11ರಂದು ಕಾರ್ಯಕಾರಿಣಿ ಸಭೆ ನಡೆಯಬೇಕಾಗಿತ್ತು . ದೊಡ್ಡಬಳ್ಳಾಪುರದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮ ಹಾಗೂ ಅಧಿವೇಶನದ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು.
ಇದೀಗ 24ರಂದು ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಜೆ.ಪಿ.ನಡ್ಡಾ, ಅಮಿತ್ ಷಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಮತ್ತು ರಾಜ್ಯ ಸಚಿವರು, ಶಾಸಕರು, ಲೋಕಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.
ಬಹುನಿರೀಕ್ಷಿತ ಕಾರ್ಯಕಾರಿಣಿ ಸಭೆಯಲ್ಲಿ ಬಿಬಿಎಂಪಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ಹಾಗು 2023ರ ವಿಧಾನಸಭೆ ಚುನಾವವಣೆಗೆ ಕೇಸರಿ ಕಲಿಗಳು ರಣತಂತ್ರ ರೂಪಿಸಲಿದ್ದಾರೆ. ಮಂಗಳೂರು ಮತ್ತು ದೊಡ್ಡಬಳ್ಳಾಪುರದಲ್ಲಿ ನಡೆದ ಯಶಸ್ವಿ ಸಮಾವೇಶದಿಂದ ಬೀಗುತ್ತಿರುವ ಬಿಜೆಪಿ ರಾಜ್ಯಾದಂತ ಜಾತಿವಾರು ಸಮಾವೇಶಗಳನ್ನು ನಡೆಸಿ ಚುನಾವಣೆಗೆ ಸಜ್ಜು ಮಾಡಲಿದೆ.
ಇದೇ 23ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬೃಹತ್ ಎಸ್ಟಿ ಸಮಾವೇಶ ನಡೆಯಲಿದೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ತದನಂತರ ಶಿವಮೊಗ್ಗ, ಬೆಳಗಾವಿ, ಮೈಸೂರು, ಕಲಬುರಗಿ, ಹುಬ್ಬಳ್ಳಿ, ತುಮಕೂರು ಹೀಗೆ ವಿಭಾಗಾವಾರು ಜಾತಿ ಸಮಾವೇಶಗಳನ್ನು ಹಂತ ಹಂತವಾಗಿ ನಡೆಸಿ ಚುನಾವಣೆಗೆ ಸಿದ್ದರಾಗಿ ಎಂಬ ಸಂದೇಶವನ್ನು ರವಾನಿಸಲಿದೆ.
ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಂಭವವಿರುವುದರಿಂದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವುದು ಹಾಗೂ ಕಳೆದ ಬಾರಿ ಅತಿ ಕಡಿಮೆ ಅಂತರ ಮತಗಳಿಂದ ಪರಾಭವಗೊಂಡ ಕ್ಷೇತ್ರಗಳು ಹಾಗೂ ಹಳೇಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಬಿಜೆಪಿ ತೀರ್ಮಾನಿಸಿದೆ.
ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕಾದರೆ ಹಳೆ ಮೈಸೂರು ಭಾಗದಲ್ಲಿ ಕನಿಷ್ಟ 40 ಸ್ಥಾನಗಳನ್ನು ಗೆದ್ದರೆ ಮಾತ್ರ ನಿರೀಕ್ಷಿತ ಸ್ಥಾನಗಳನ್ನು ಪಡೆಯಲು ಸಾಧ್ಯ. ಹೀಗಾಗಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿ ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಕ್ಟೋಬರ್ ತಿಂಗಳಿನಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ಸದಸ್ಯರಾಗಿರುವ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗೆ 2023ರ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸಲು ಮುಂದಾಗಿದೆ.