ಸಾವಿರಾರು ಜನ ಸೇರಿ ಭಿಕ್ಷುಕನ ಅಂತ್ಯಕ್ರಿಯೆ; ವಿಜಯನಗರದಲ್ಲೊಂದು ಮಾದರಿ ಕಾರ್ಯ

ವಿಜಯನಗರ: ರಸ್ತೆ ಬದಿಯಲ್ಲಿ ಸಾಕಷ್ಟು ಭಿಕ್ಷುಕರು ಭಿಕ್ಷೆ ಬೇಡುವುದನ್ನು ಪ್ರತಿ ದಿನವೂ ನಾವು ನೋಡುತ್ತಲೇ ಇರುತ್ತೇವೆ.
ವಿಜಯನಗರದಲ್ಲಿ ಭಿಕ್ಷೆ ಬೇಡುತ್ತಿದ್ದ 45 ವರ್ಷದ ಹುಚ್ಚ ಬಸ್ಯಾ ಎಂಬ ಭಿಕ್ಷುಕನಿಗೆ ನವೆಂಬರ್ 12ರಂದು ಬಸ್ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಜನರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆತ ಬದುಕುಳಿಯಲಿಲ್ಲ. ಆ ಬಸ್ಯಾ ಅವರ ಅಂತಿಮ ವಿಧಿವಿಧಾನಗಳ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಅವರ ಬಗ್ಗೆ ಗೌರವವನ್ನು ತೋರಿಸಲು ರಸ್ತೆಗಳಲ್ಲಿ ಸಾಗಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಭಿಕ್ಷುಕ ಬಸ್ಯಾ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ವಾದ್ಯವೃಂದದ ಮೂಲಕ ರಸ್ತೆಗಳಲ್ಲಿ ಕೊಂಡೊಯ್ಯಲಾಯಿತು. ಅಷ್ಟಕ್ಕೂ ಹಿಂದು ಮುಂದಿಲ್ಲದ ಬಸ್ಯಾಗೆ ಜನರು ಇಷ್ಟು ಪ್ರೀತಿ ತೋರಿಸಲು ಕಾರಣವೇನೆಂದು ಯೋಚಿಸುತ್ತಿದ್ದೀರಾ? ಭಿಕ್ಷುಕ ಬಸ್ಯಾ ಒಬ್ಬ ವ್ಯಕ್ತಿಯಿಂದ ಕೇವಲ 1 ರೂಪಾಯಿಯನ್ನು ಭಿಕ್ಷೆಯಾಗಿ ತೆಗೆದುಕೊಂಡು ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸುತ್ತಿದ್ದರು. ಜನರೇ ಬಲವಂತ ಮಾಡಿದರೂ ಆತ ಹೆಚ್ಚು ಹಣ ತೆಗೆದುಕೊಳ್ಳುತ್ತಿರಲಿಲ್ಲ.
ಬಸ್ಯಾನಿಗೆ ಭಿಕ್ಷೆ ನೀಡಿದರೆ ಅದೃಷ್ಟ ಬರುತ್ತದೆ ಎಂದು ಸ್ಥಳೀಯರು ನಂಬಿದ್ದರು. ಆತ ಏನು ಹೇಳಿದರೂ ಅದು ನಿಜವಾಗುತ್ತಿತ್ತು. ಆದ್ದರಿಂದ ಜನರು ಬಸ್ಯಾನ ಬಗ್ಗೆ ಗೌರವವನ್ನು ಹೊಂದಿದ್ದರು. ಅದರಿಂದಲೇ ಬಸ್ಯಾನ ಅಂತ್ಯಕ್ರಿಯೆಯನ್ನು ಊರಿನವರೇ ಸೇರಿಕೊಂಡು ಗೌರವಪೂರ್ವಕವಾಗಿ, ಅದ್ದೂರಿಯಾಗಿಯೇ ನಡೆಸಿಕೊಟ್ಟರು.