ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಪ್ರೇರಕರಾದಿರಿ, ಟಿಪ್ಪು ಜಯಂತಿ ನಡೆಸಿದಿರಿ, ಶಾದಿ ಭಾಗ್ಯ ಕೊಟ್ಟಿರಿ, ಆದರೆ ಫಲವೇನು?

ಬೆಂಗಳೂರು: ಮುಸ್ಲಿಮರು ಒಟ್ಟಾಗಬೇಕೆಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಆದರೆ ಪಿಸುಮಾತು ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಸಲೀಂ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ, ಉಗ್ರಪ್ಪ ಅವರಿಗೆ ಬರೇ ನೋಟೀಸ್ ನೀಡಿದೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಟೀಕೆ ಮಾಡಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಅಲ್ಪಸಂಖ್ಯಾತರೇ, ಕರ್ನಾಟಕ ಕಾಂಗ್ರೆಸ್ ಪಕ್ಷದ ನರಿ ಬುದ್ಧಿಯ ಬಗ್ಗೆ ಇನ್ನೊಮ್ಮೆ ಯೋಚಿಸಿ ಎಂದಿದೆ.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ 'ಡಿಕೆ ಡಿಕೆ' ಎಂಬ ಘೋಷಣೆ. ಅಲ್ಲಿಗೆ ಕಾಂಗ್ರೆಸ್ ಬಣ ರಾಜಕಾರಣದ ಇನ್ನೊಂದು ಮುಖ ಅನಾವರಣಗೊಂಡಿದೆ. ಒಡೆದ ಮನೆಯಾಗಿರುವ ಕಾಂಗ್ರೆಸ್‌ನಲ್ಲಿ ಇದು ಸಾಮಾನ್ಯವಲ್ಲವೇ ಎಂದು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಹೇಳಿದೆ.
ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾತ್ರ ಸಾಕು ಎಂದು ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಡಿಕೆ ಡಿಕೆ ಎಂದು ಕಾರ್ಯಕರ್ತರು ವ್ಯಕ್ತಿ ಪೂಜೆ ನಡೆಸಿದರೆ ಬುರುಡೆರಾಮಯ್ಯ ಹೇಗೆ ಸಹಿಸಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ 'ಡಿಕೆ ಡಿಕೆ' ಎಂಬ ಘೋಷಣೆ ಸದ್ದು ಮಾಡುತ್ತಿದೆ.'ಹೌದು ಹುಲಿಯಾ' ಎಂದು ಬೊಬ್ಬೆ ಹಾಕುವುದಕ್ಕೆ ನೀವೂ ಒಂದು ತಂಡ ತಯಾರು ಮಾಡಿ ಕರ್ನಾಟಕ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಸಿದ್ದರಾಮಯ್ಯನವರೇ, ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಪ್ರೇರಕರಾದಿರಿ. ಟಿಪ್ಪು ಜಯಂತಿ ನಡೆಸಿದಿರಿ. ಶಾದಿ ಭಾಗ್ಯ ಕೊಟ್ಟಿರಿ. ಆದರೆ ಫಲವೇನು? ಅಲ್ಪಸಂಖ್ಯಾತರ ಸಮಾವೇಶದಲ್ಲಿ ನಿಮ್ಮ ಜೊತೆ ಅಲ್ಪಸಂಖ್ಯಾತ ಸಮುದಾಯದವರೇ ಇರಲಿಲ್ಲ. ಮೂಲ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು ಡಿಕೆ ಡಿಕೆ ಎನ್ನುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.