ಗಣೇಶ ಚತುರ್ಥಿ : ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ನಿಮಗೆ 'ಈ ರೂಲ್ಸ್ ' ಗೊತ್ತಿರಲಿ.

ಬೆಂಗಳೂರು : ಸಿಲಿಕಾನ್ ಸಿಟಿ ಯಲ್ಲಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಬಿಬಿಎಂಪಿ ಸೂಚಿಸಿರುವ ಕ್ರಮಗಳನ್ನು ಪಾಲಿಸಬೇಕಿದ್ದು, ನಿಗದಿ ಮಾಡಿದ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮೂರು ದಿನ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬಿಬಿಎಂಪಿಯ ರೂಲ್ಸ್ ಗೆ ಅನುಗುಣವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಿದ್ದು, ಅಧಿಕಾರಿಗಳು ನಿಗದಿ ಮಾಡಿರುವ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು, ಒಂದು ವಾರ್ಡ್ ಗೆ ಒಂದು ಗಣೇಶ ಮಾತ್ರ ಪ್ರತಿಷ್ಠಾಪಿಸಬೇಕಿದ್ದು, ಸ್ಥಳವನ್ನು ಇನ್ಸ್ ಪೆಕ್ಟರ್ ಗಳು ಅಥವಾ ಎಸಿಪಿಗಳು ನಿಗದಿ ಮಾಡುತ್ತಾರೆ. ಪಾಲಿಕೆಯ ವಾರ್ಡ್ ಅಧಿಕಾರಿಗಳು ಸಾರ್ವಜನಿಕವಾಗಿ ಗಣಪತಿ ಇಡಲು ಅನುಮತಿ ಮತ್ತು ಸ್ವಚ್ಚತೆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಇನ್ನು ಗಣೇಶ ಕೂರಿಸುವ ಆಯೋಜಕರು ಎರಡು ಡೋಸ್ ಗಳ ಲಸಿಕೆಯನ್ನು ಪಡೆದಿರಬೇಕು, ಗಲ್ಲಿಗಲ್ಲಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಇದರೊಂದಿಗೆ ಎಲ್ಲೆಂದರಲ್ಲಿ ಗಣೇಶ ವಿಸರ್ಜನೆ ಮಾಡುವಂತಿಲ್ಲ, ಮನೆಗಳಲ್ಲಿ ಅಥವಾ ಬಿಬಿಎಂಪಿ ನಿಗದಿ ಮಾಡಿದ ಸ್ಥಳಗಳಲ್ಲಿ ಮಾತ್ರ ಗಣೇಶ ವಿಸರ್ಜನೆ ಮಾಡಬೇಕು, ಬಿಬಿಎಂಪಿ ವತಿಯಿಂದ ನೀರಿನ ಟ್ಯಾಂಕ್ ಗಳನ್ನು ಇರಿಸಲಾಗುತ್ತದೆ. ಸ್ಥಳದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಬೆಂಗಳೂರಿನ 198 ವಾರ್ಡ್ಗಳಲ್ಲಿ ಒಂದೊಂದು ವಾರ್ಡ್ನಲ್ಲಿ ಕೇವಲ ಒಂದು ಗಣಪತಿಯನ್ನು ಮಾತ್ರ ಸ್ಥಾಪಿಸಲು ಅವಕಾಶವಿದ್ದು, ಸೆ.8 ರೊಳಗೆ ಜಾಗ ನಿಗದಿಪಡಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಇದರೊಂದಿಗೆ ಸಾರ್ವಜನಿಕರ ವಾಹನಗಳಿಗೆ ಯಾವುದೇ ಅಡ್ಡಿಯಾಗದಂತೆ ಗಣೇಶ ಮೂರ್ತಿಯನ್ನು ಸ್ಥಾಪಿಸಬೇಕು. ನಾಲ್ಕು ಅಡಿ ಎತ್ತರ ಮೀರಿ ಗಣೇಶ ಮೂರ್ತಿ ಕೂರಿಸುವಂತಿಲ್ಲ. ಯಾವುದೇ ಸಾರ್ವಜನಿಕ ಸಮಾರಂಭ, ನೃತ್ಯ - ಸಂಗೀತ ಸೇರಿದಂತೆ ಇತರೇ ಮನರಂಜನೆ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ಸಾರ್ವಜನಿಕವಾಗಿ ಸ್ಥಾಪಿರುವ ಗಣಪತಿಯ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಈ ವೇಳೆ ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ ಹಾಗೂ ಪ್ರತಿದಿನ ಸ್ಥಳವನ್ನು ಸ್ಯಾನಿಟೈಸೇಷನ್ ಮಾಡಲೇಬೇಕಿದೆ. ಒಂದು ಬಾರಿ ಕೇವಲ 20 ಜನ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಬೇಕು. ಸ್ಥಳದಲ್ಲಿ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕವಾಗಿ ಗಣೇಶ ಕೂರಿಸುವ ಆಯೋಜಕರು ಲಸಿಕೆ ಪ್ರಮಾಣ ಪತ್ರ ಹಾಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು.
ಇನ್ನು ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೆಚ್ಚು ಜನ ಸೇರಬಾರದು, ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಲಾಗಿದೆ. ಒಂದು ವೇಳೆ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವೇಳೆ ಬಿಬಿಎಂಪಿಯ ಈ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾಯ್ದೆ 2005 ಹಾಗು IPC 188 ಅಡಿಯಲ್ಲಿ ಕ್ರಮ ತೆಗದುಕೊಳ್ಳಲಾಗುತ್ತದೆ..