ಕುನ್ನೂರ ಗಣಪನಿಗೆ ನೆರೆ ರಾಜ್ಯದಲ್ಲೂ ಬೇಡಿಕೆ | Shiggaon |
ರಾಜ್ಯ ಅಲ್ಲದೆ ಹೊರ ರಾಜ್ಯಗಳಾದ ಅಂದ್ರಪ್ರದೇಶ, ಗೋವಾ, ಮಹಾರಾಷ್ಟ್ರದಲ್ಲಿಯೂ ಭಕ್ತ ಸಮೂಹ ಹೊಂದಿರುವ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಕುನ್ನೂರು ಗಣಪನ ಮೂರ್ತಿಗಳಿಗೆ ಪಿ.ಒ.ಪಿ ವಿಗ್ರಹಗಳ ಭರಾಟೆಯ ಪ್ರಭಾವ ಬೀರದಿರುವುದು ವಿಶೇಷವಾಗಿದೆ. ಸುಮಾರು ನೂರು ವರ್ಷಗಳಿಗೂ ಹೆಚ್ಚು ಕಾಲ ಪರಂಪರಾಗತವಾಗಿ ಗಣಪತಿ ವಿಗ್ರಹಗಳ ತಯಾರಿಕೆಯನ್ನು ಮುಂದುವರೆಸಿಕೊಂಡು ಬಂದಿರುವ ಕುನ್ನೂರು ಗ್ರಾಮದ ಕೆಲ ಕುಟುಂಬಗಳು ತಯಾರಿಸುವ ಮಣ್ಣಿನ ಗಣಪತಿ ಮೂರ್ತಿಗಳಿಗೆ ಇಂದಿಗೂ ಸಹ ಬೇಡಿಕೆ ಉಳಿಸಿಕೊಂಡಿವೆ. ಪಿಒಪಿ ಗಣಪನ ಅಬ್ಬರದಲ್ಲೂ ಮಣ್ಣಿನ ಗಣಪತಿಗಳ ಬೇಡಿಕೆ ಕುಂದಿಲ್ಲ. ಪರಿಸರ ಜಾಗೃತಿಯಿಂದಾಗಿ ವರ್ಷದಿಂದ ವರ್ಷಕ್ಕೆ ಮಣ್ಣಿನ ಗಣಪನ ಬೇಡಿಕೆಯ ಮಹಾಪೂರವೇ ಹರಿದು ಬರುತ್ತಿತ್ತು, ಆದರೆ ಕರೋನ ಮಹಾಮಾರಿಯಿಂದಾಗಿ ಕಳೆದ ವರ್ಷದಿಂದ ವ್ಯಾಪಾರದಲ್ಲಿ ಏರಿಳಿತವಾಗಿದೆ ಈ ವರ್ಷ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎನ್ನುತ್ತಾರೆ ಇಲ್ಲಿನ ಮಣ್ಣಿನ ಗಣಪತಿ ಮೂರ್ತಿ ತಯಾರಕರು. ತಲೆಮಾರಿನಿಂದಲೂ ಸಾಂಪ್ರದಾಯಿಕವಾಗಿ ಮಣ್ಣಿನ ಗಣಪನನ್ನು ತಯಾರಿಸುತ್ತಿರುವ ಕುನ್ನೂರ ಗ್ರಾಮದ ಕುಟುಂಬಗಳು ಪರಿಸರ ಕಾಳಜಿಯನ್ನು ಪ್ರದರ್ಶಿಸುತ್ತಿವೆ ಪೂರ್ವಿಕರ ಪರಂಪರೆಯನ್ನು ಇಂದಿಗೂ ಮುಂದುವರೆಸಿಕೊಂಡು ಆಧುನಿಕತೆಯ ಸೋಂಕಿಗೆ ತಮ್ಮ ಕಾಯಕ ಬಲಿಕೊಡದೆ ಅದನ್ನೇ ಉಪ ಜೀವನವಾಗಿ ಮುಂದುರೆಸಿಕೊಂಡು ಬಂದಿರುವುದು ವಿಶೇಷ.