ಭೂತಾಯಿಗೆ ಉಡಿ ಅರ್ಪಿಸಿದ ರೈತ ಸಮುದಾಯ

ಸೀಗೆ ಹುಣ್ಣಿಮೆ ಎಂದರೆ ರೈತರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ, ಹಸಿರು ಹೊದ್ದು ನಿಲ್ಲುವ ಭೂತಾಯಿಗೆ ಉಡಿ ತುಂಬಿ ಚರಗ ಚೆಲ್ಲುವುದೇ ಸೀಗೆ ಹುಣ್ಣಿಮೆ ವಿಶೇಷತೆ ಆಗಿದೆ. ಹೌದು ಇಂದು ನಾಡಿನಾದ್ಯಂತ ಸಂಭ್ರಮದಿಂದ ಸೀಗೆ ಹುಣ್ಣಿಮೆಯನ್ನು ಆಚರಿಸಲಾಗಿದೆ. ಧಾರವಾಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಭೂಮಿ ತಾಯಿಗೆ ಉಡಿ ತುಂಬಿ ಚರಗ ಚೆಲ್ಲಲಾಗಿದೆ. ಅದ್ರಂತೆ ಧಾರವಾಡ ಹೊರವಲಯದ ರೈತರ ಒಬ್ಬರ ಹೊಲದಲ್ಲಿ ಕುಟುಂಬ ಸಮೇತರಾಗಿ ಹೊಲಕ್ಕೆ ಪೂಜೆ ಸಲ್ಲಿಸಿ, ಕುಟುಂಬ ಸಮೇತರಾಗಿ ವಿಶೇಷ ಭೋಜನ ಸವಿದರು. ಹುರಕ್ಕಿ ಹೋಳಿಗೆ, ಖರ್ಚಿಕಾಯಿ, ಜೋಳದ ಕಡಬು, ಪುಂಡಿ ಪಲ್ಲೆ, ಕುಚ್ಚಿದ ಕಾರ ಸೀಗೆ ಹುಣ್ಣಿಮೆ ವಿಶೇಷ. ಈ ಎಲ್ಲ ವಿಶೇಷ ಖಾದ್ಯಗಳನ್ನು ಹೊಲಕ್ಕೆ ಕಟ್ಟಿಕೊಂಡು ಹೋಗಿ ರೈತ ಸಮುದಾಯ ಸವಿದು ಸಂಜೆವರೆಗೂ ಹೊಲದಲ್ಲಿ ಕಾಲ ಕಳೆದರು. ಚಿಣ್ಣರು ಹೊಲದಲ್ಲಿ ಗಾಳಿ ಪಟ ಹಾರಿಸುವ ಮೂಲಕ ಆಟ ಆಡಿ ಖುಷಿಪಟ್ಟರು