ರಾಜ್ಯದ ಹಲವು ಹೆದ್ದಾರಿ ಅಭಿವೃದ್ಧಿ: ನಿತಿನ್ ಗಡ್ಕರಿ
ಬೆಂಗಳೂರು: ಹೊನ್ನಾವರ-ಚಿತ್ತೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕರ್ನಾಟಕದ ಹಲವು ಹೆದ್ದಾರಿಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2022-23ನೇ ಸಾಲಿನಲ್ಲಿ ಅಭಿವೃದ್ಧಿಗೆ ಆಯ್ದುಕೊಂಡ ರಾಜ್ಯದ ಹೆದ್ದಾರಿ ವಿವರಗಳನ್ನು ನೀಡಿದ್ದಾರೆ.
2022-23ನೇ ಸಾಲಿನಲ್ಲಿ ಎಕ್ಸ್‌ಪ್ರೆಸ್ ಕಾರಿಡಾರ್ ಮಾದರಿ ಅಡಿಯಲ್ಲಿ 6.910 ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ ಹೆದ್ದಾರಿ ಸಚಿವಾಲಯ ಮುಂದಾಗಿದೆ.
ಇದೇ ಮಾರ್ಗದಲ್ಲಿ ₹198.38 ಕೋಟಿ ವೆಚ್ಚದಲ್ಲಿ ಹೊಸೂರು ಮತ್ತು ತಾಳಗುಪ್ಪಗಳಲ್ಲಿ ರಸ್ತೆ ಮೇಲು ಸೇತುವೆ ನಿರ್ಮಿಸಲಿದೆ.
ಸಿಂದಿಗೇರಿ-ಬಳ್ಳಾರಿ ರಸ್ತೆ ಅಗಲೀಕರಣಕ್ಕೂ ₹120.5 ಕೋಟಿ ಮೀಸಲಿಟ್ಟಿದೆ. ಎನ್-150ಎ ಮಾರ್ಗದಲ್ಲಿ 19.8 ಕಿಲೋಮೀಟರ್ ರಸ್ತೆ ವಿಸ್ತರಣೆಯಾಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
₹142 ಕೋಟಿ ವೆಚ್ಚದಲ್ಲಿ ರಾಯಚೂರು ಜಿಲ್ಲೆಯ ವೆಂಕಟೇಶ್ವರ ಕ್ಯಾಂಪ್‌ನಿಂದ ದಡೆಸುಗರು ಕ್ಯಾಂಪ್ ರಸ್ತೆ ಅಭಿವೃದ್ಧಿಗೂ ಹೆದ್ದಾರಿ ಸಚಿವಾಲಯ ಮುಂದಾಗಿದೆ.