ಜಿಗಣಿ ಬಳಿ 67ಎಕರೆ ಗೋಮಾಳ ಜಾಗ ಅತಿಕ್ರಮಣ: 3 ತಿಂಗಳಲ್ಲಿ ತೆರವಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು, ಅಕ್ಟೋಬರ್ 19;: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿ ಇರುವ ಕಾಚರನಾಯಕನಹಳ್ಳಿಯಲ್ಲಿ ಒತ್ತುವರಿಯಾಗಿರುವ 67 ಎಕರೆ ಗೋಮಾಳ ಜಾಗವನ್ನು ಮೂರು ತಿಂಗಳಲ್ಲಿ ತೆರವು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ.
ಸಾರ್ವಜನಿಕ ಗೋಮಾಳ ಪ್ರದೇಶವನ್ನು ತೆರವುಗೊಳಿಸುವುದರ ಜೊತೆಗೆ ಆ ಜಾಗದ ಆಸ್ತಿ ಪತ್ರಗಳಲ್ಲಿ ಇರುವ ಖಾಸಗಿ ವ್ಯಕ್ತಿಗಳನ್ನು ದಾಖಲೆಗಳಿಂದ ತೆಗೆದು ಹಾಕಿ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ಗೋಮಾಳ ಆಸ್ತಿ ಅತಿಕ್ರಮಣ ಆಗಿದ್ದನ್ನು ವಿರೋಧಿಸಿ ಜಿಗಣಿ ಸ್ಥಳೀಯ ನಿವಾಸಿ ಎನ್.ಜಯಪಾಲ್ ರೆಡ್ಡಿ ಎಂಬುವವರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು. ಈ ಅರ್ಜಿಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎನ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸಂಬಂಧಿಸಿದ ಅಧಿಕಾರಿಗಳಿಗೆ ತೆರವಿಗೆ ಸೂಚನೆ, ನಿರ್ದೇಶನ ನೀಡಿದ ಬಳಿಕ ಅರ್ಜಿ ವಿಚಾರಣೆಯನ್ನು ಮುಂದಿನ ವರ್ಷ 2023ರ ಜನವರಿ 25ಕ್ಕೆ ಮುಂದೂಡಿತು. ಇದಕ್ಕು ಮುನ್ನ ವಿಚಾರಣೆ ವೇಳೆ, ಈ ಹಿಂದೆ ಕೋರ್ಟ್ ನೀಡಿದ್ದ ಸೂಚನೆಯಂತೆ ಸರ್ಕಾರದ ಪರ ವಕೀಲರು ಆನೇಕಲ್ ತಾಲೂಕು ತಹಶೀಲ್ದಾರ್ ಸಲ್ಲಿಸಿದ್ದ ಅಫಿಡವಿಟ್‌ಅನ್ನು ಸಲ್ಲಿಸಿದರು.ಅದರಲ್ಲಿ 67 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದರ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೇ ಈ ಅತಿಕ್ರಮಣದಲ್ಲಿ 306 ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ 30 ಮನೆಗಳನ್ನು ಅಧಿಕಾರಿಗಳು ತೆಗೆದು ಹಾಕಿದ್ದಾರೆ. ಉಳಿದ ಅತಿಕ್ರಮಣ ತೆರವುಗೊಳಿಸಲು ಕಾಲಾವಕಾಶ ಕೋರಲಾಗಿದೆ ಎಂದು ಹೇಳಲಾಗಿದೆ.