ಏಕದಿನ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ: ಇಬ್ಬರು ಸ್ಟಾರ್ ಆಟಗಾರರು ತಂಡಕ್ಕೆ ಕಮ್‌ಬ್ಯಾಕ್

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ಆಯೋಜನೆಯಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಇದೀಗ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು ಬಲಿಷ್ಠ 16 ಆಟಗಾರರ ಪಡೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಗುರುವಾರ ಘೋಷಣೆ ಮಾಡಿದೆ.
ಟೆಸ್ಟ್ ಸರಣಿಯಲ್ಲಿ ಸತತ ಸೋಲು ಅನುಭವಿ ಹಿನ್ನಡೆ ಕಂಡಿರುವ ಆಸ್ಟ್ರೇಲಿಯಾ ತಂಡ ಅಂತಿಮ ಎರಡು ಪಂದ್ಯಗಳಲ್ಲಿ ಪೈಪೋಟಿ ನೀಡಲು ಎದುರು ನೋಡುತ್ತಿದೆ. ಇಂಥಾ ಸಂದರ್ಭದಲ್ಲಿ ಏಕದಿನ ಸರಣಿಯನ್ನು ಘೋಷಿಸಲಾಗಿದೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ 16 ಆಟಗಾರರ ಬಲಿಷ್ಠ ತಂಡ ಏಕದಿನ ಮಾದರಿಯಲ್ಲಿ ಭಾರತದ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕಮ್‌ಬ್ಯಾಕ್ ಮಾಡಿದ ಬಲಿಷ್ಠ ಆಟಗಾರರು
ಸುದೀರ್ಘ ಕಾಲದಿಂದ ಆಸ್ಟ್ರೇಲಿಯಾದ ಬಳಗದಿಂದ ಹೊರಬಿದ್ದಿದ್ದ ಪ್ರಮುಖ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಿಚೆಲ್ ಮಾರ್ಶ್ ಆಸ್ಟ್ರೇಲಿಯಾ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರು ಕೂಡ ಮೊಣಕಾಲು ಹಾಗೂ ಕಾಲಿನ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಉಳಿದಂತೆ ವೇಗಿ ಜೇ ರಿಚರ್ಡ್ಸನ್ ಕೂಡ ಆಸಿಸ್ ತಂಡದಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದ್ದಾರೆ.
ವಾಪಾಸಾಗಲಿದ್ದಾರೆ ವಾರ್ನರ್
ಇನ್ನು ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ಟೆಸ್ಟ್ ತಂಡದಿಂದ ಹೊರಬಿದ್ದಿರುವ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಈಗಾಗಲೇ ಆಸ್ಟ್ರೇಲಿಯಾಗೆ ವಾಪಾಸಾಗಿದ್ದಾರೆ. ಇವರು ಏಕದಿನ ಸರಣಿಗೆ ಮತ್ತೆ ಭಾರತಕ್ಕೆ ಮರಳಲಲಿದ್ದಾರೆ. ಏಕದಿನ ಸರಣಿಗೆ ಪ್ರಕಟಿಸಿರುವ ತಂಡದಲ್ಲಿ ವಾರ್ನರ್ ಮತ್ತೆ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗಾಯಗೊಂಡಿರುವ ವೇಗಿ ಜೋಶ್ ಹೇಜಲ್‌ವುಡ್ ಏಕದಿನ ತಂಡದಲ್ಲಿಯೂ ಸ್ಥಾನವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ. ಹೇಜಲ್‌ವುಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು ಕೂಡ ಸಂಪೂರ್ಣ ಚೇತರಿಕೆಯಾಗದ ಕಾರಣ ಆಸ್ಟ್ರೇಲಿಯಾ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ.
ಈಗಾಗಲೇ ಪ್ರಕಟವಾಗಿದೆ ಭಾರತ ತಂಡ
ಇನ್ನು ಭಾರತದಲ್ಲಿಯೇ ನಡೆಯುವ ಈ ಸರಣಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. 18 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದ್ದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯವಾಗಲಿದ್ದು ಉಪನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಅಂತಿಮ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರೇ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಜಯ್‌ದೇವ್ ಉನಾದ್ಕಟ್ ಸುದೀರ್ಘ ಕಾಲದ ಬಳಿಕ ಏಕದಿನ ಮಾದರಿಗೆ ಕಮ್‌ಬ್ಯಾಕ್ ಮಾಡಿದ್ದು ಮಾರ್ಚ್ 17ರಿಂದ ಏಕದಿನ ಸರಣಿ ಆರಂಭವಾಗಲಿದೆ.
ಆಸ್ಟ್ರೇಲಿಯಾದ ಏಕದಿನ ತಂಡ ಹೀಗಿದೆ
ಪ್ಯಾಟ್ ಕಮ್ಮಿನ್ಸ್ (ನಾಯಕ), ಶಾನ್ ಅಬಾಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮೆರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೈನ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯ್ನಿಸ್, ಡೇವಿಡ್ ವಾರ್ನರ್, ಆಡಮ್ ಜಂಪಾ