ಬೆಂಗಳೂರು ಮತದಾರರ ಮಾಹಿತಿ ಕಳ್ಳತನ: ಎನ್‌ಜಿಒಗೆ ನಕಲಿ ಐಡಿ ವಿತರಿಸಿದ ಮೂವರು ಅಧಿಕಾರಿಗಳು ಅಮಾನತು

ಬೆಂಗಳೂರು ಮತದಾರರ ಮಾಹಿತಿ ಕಳ್ಳತನ: ಎನ್‌ಜಿಒಗೆ ನಕಲಿ ಐಡಿ ವಿತರಿಸಿದ ಮೂವರು ಅಧಿಕಾರಿಗಳು ಅಮಾನತು

ಬೆಂಗಳೂರು ;  ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಅನಧಿಕೃತ ಗುರುತಿನ ಚೀಟಿಗಳನ್ನು ನೀಡಿದ ಮೂವರು ಚುನಾವಣಾ ನೋಂದಣಿ ಅಧಿಕಾರಿಗಳನ್ನು (ಇಆರ್‌ಒ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೋಮವಾರ ಅಮಾನತುಗೊಳಿಸಿದೆ.

ಅಮಾನತುಗೊಂಡ ಅಧಿಕಾರಿಗಳಲ್ಲಿ ಮಹದೇವಪುರದ ಇಆರ್‌ಒ ಕೆ. ಚಂದ್ರಶೇಖರ, ಚಿಕ್ಕಪೇಟೆ ಇಆರ್‌ಒ ವಿ.ಬಿ.ಭೀಮಾಶಂಕರ್‌, ಕಂದಾಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದ ಶಿವಾಜಿನಗರದ ಇಆರ್‌ಒ ಸುಹೇಲ್‌ ಅಹಮದ್‌ ಸೇರಿದ್ದಾರೆ.

“ಜನತಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ, ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಗುರುತಿನ ಚೀಟಿ ನೀಡಲು ಅವಕಾಶವಿಲ್ಲ. ಇದನ್ನು ಉಲ್ಲಂಘಿಸಿ ಕಾರ್ಡ್‌ಗಳಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಎಂದು ಬರೆದು ಸಂಸ್ಥೆಗೆ ಇಆರ್‌ಒ ಮೂಲಕ ಗುರುತಿನ ಚೀಟಿ ನೀಡಿರುವುದು ಕಂಡುಬಂದಿದೆ” ಎಂದು ಮಹದೇವಪುರ ಅಮಾನತು ಆದೇಶದಲ್ಲಿ ತಿಳಿಸಿದೆ.

ಶಿವಾಜಿನಗರದ ಆದೇಶದಲ್ಲಿ ಇಆರ್‌ಒ ಸುಹೇಲ್ ಅಹಮದ್ ಅವರು 14 ಬೂತ್ ಮಟ್ಟದ ಸಂಯೋಜಕ (ಬಿಎಲ್‌ಸಿ) ಕಾರ್ಡ್‌ಗಳನ್ನು ನೀಡಿದ್ದಾರೆ ಎಂದು ಹೆಚ್ಚುವರಿಯಾಗಿ ಉಲ್ಲೇಖಿಸಲಾಗಿದೆ.

ದಿ ನ್ಯೂಸ್ ಮಿನಿಟ್‌ ಮತ್ತು ಪ್ರತಿಧ್ವನಿ ನಡೆಸಿದ ಜಂಟಿ ತನಿಖಾ ವರದಿಯ ನಂತರ ಮತದಾರರರ ಮಾಹಿತಿ ಕಳ್ಳತನದ ಬೃಹತ್ ಹಗರಣ ಬಹಿರಂಗವಾಗಿದ್ದು, ಈ ವರೆಗೆ ಐವರನ್ನು ಬಂಧಿಸಲಾಗಿದೆ. ಅಲ್ಲದೆ ಹಗರಣದಲ್ಲಿ ಬಿಜೆಪಿಗೆ ನೇರ ಕೈವಾಡವಿದ್ದು, ಏಜೆಂಟರಿಗೆ ಬಿಜೆಪಿ ಕಚೇರಿಯಲ್ಲೆ ತರಬೇತಿ ನೀಡಲಾಗಿತ್ತು ಎಂದು ಇತ್ತೀಚೆಗಿನ ವರದಿ ಬಹಿರಂಗಪಡಿಸಿದೆ.