NDTV ತೊರೆದ ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್

ಹೊಸದಿಲ್ಲಿ: ಪತ್ರಕರ್ತ ಶ್ರೀನಿವಾಸನ್ ಜೈನ್ ಅವರು ಎನ್‌ಡಿಟಿವಿಗೆ ರಾಜೀನಾಮೆ ನೀಡಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ. ಜೈನ್ 1995 ರಿಂದ NDTV ಚಾನೆಲ್‌ನಲ್ಲಿದ್ದರು.
"ಎನ್‌ಡಿಟಿವಿಯೊಂದಿಗಿನ ಅದ್ಭುತವಾದ, ಸುಮಾರು ಮೂರು ದಶಕಗಳ ಸುದೀರ್ಘ ಪಯಣ ಇಂದು ಕೊನೆಗೊಳ್ಳುತ್ತಿದೆ" ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ತಮ್ಮ ತನಿಖಾ ವರದಿಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಜೈನ್, ಚಾನೆಲ್‌ನ ರಿಯಾಲಿಟಿ ಚೆಕ್ ಮತ್ತು ಟ್ರೂತ್ ವರ್ಸಸ್ ಹೈಪ್ ಕಾರ್ಯಕ್ರಮಗಳ ನಿರೂಪಕರಾಗಿದ್ದರು.
ಅದಾನಿ ಸಮೂಹವು ಚಾನೆಲ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಪತ್ರಕರ್ತ ರವೀಶ್ ಕುಮಾರ್ ಮತ್ತು ಗ್ರೂಪ್ ಅಧ್ಯಕ್ಷೆ ಸುಪರ್ಣಾ ಸಿಂಗ್ ಸೇರಿದಂತೆ ಎನ್‌ಡಿಟಿವಿಯ ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಡಿಸೆಂಬರ್‌ನಲ್ಲಿ ಕಂಪನಿಯ ಮಂಡಳಿಯನ್ನು ತೊರೆದಿದ್ದರು.