ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ

ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ

ಜೈಪುರ: ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ. ಭಾರತ ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿರುವ ಅವರು, 'ಭಾರತದ ರಾಜಕಾರಣದಲ್ಲಿ ಸದ್ಯ ಎರಡು ಪದಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಒಂದು ಹಿಂದು ಮತ್ತು ಇನ್ನೊಂದು ಹಿಂದುತ್ವವಾದ. ಹಿಂದು ಮತ್ತು ಹಿಂದುತ್ವವಾದದ ನಡುವೆ ವ್ಯತ್ಯಾಸಗಳಿವೆ. ನಾನು ಹಿಂದು. ಆದರೆ, ಹಿಂದುತ್ವವಾದಿಯಲ್ಲ,' ಎಂದು ಅವರು ಹೇಳಿದ್ದಾರೆ.

'ಹಿಂದುತ್ವವಾದಿಗಳು ಅಧಿಕಾರ ಪಡೆಯುವುದಕ್ಕಾಗಿ ತಮ್ಮ ಇಡೀ ಜೀವನ ಸವೆಸುತ್ತಾರೆ. ಅವರಿಗೆ ಅಧಿಕಾರವಷ್ಟೇ ಮುಖ್ಯ. ಅದಕ್ಕಾಗಿ ಅವರು ಏನುಬೇಕಾದರೂ ಮಾಡುತ್ತಾರೆ. ಸಟ್ಟಾಗ್ರಹ ( ಅಧಿಕಾರದ ಹಪಾಹಪಿ) ಮಾಡುತ್ತಾರೆಯೇ ಹೊರತು, ಸತ್ಯಾಗ್ರಹ ಮಾಡಲಾರರು,' ಎಂದು ಅವರು ಹೇಳಿದರು.

'ಅಧಿಕಾರದ ಲಾಲಸೆ ಹೊಂದಿರುವ ಹಿಂದುತ್ವವಾದಿಗಳು 2014ರಿಂದಲೂ ದೇಶದಲ್ಲಿ ಅಧಿಕಾರದಲ್ಲಿದ್ದಾರೆ. ಈ ಹಿಂದುತ್ವವಾದಿಗಳನ್ನು ಅಧಿಕಾರದಿಂದ ಕಿತ್ತೊಗೆದು ಹಿಂದುಗಳನ್ನು ಮರಳಿ ಅಧಿಕಾರಕ್ಕೆ ತರಬೇಕು,' ಎಂದು ಅವರು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು.

ಮಹಾತ್ಮಾ ಗಾಂಧೀಜಿ ಅವರು ಹಿಂದುವಾಗಿದ್ದರು. ಗೋಡ್ಸೆ ಹಿಂದುತ್ವವಾದಿಯಾಗಿದ್ದರು ಎನ್ನುವ ಮೂಲಕ ಎರಡೂ ವಾದಗಳ ನಡುವಿನ ವ್ಯತ್ಯಾಸವನ್ನು ವ್ಯಕ್ತಿತ್ವದ ಉದಾಹರಣೆಯ ಮೂಲಕ ವಿವರಿಸುವ ಪ್ರಯತ್ನ ಮಾಡಿದರು.

ಅಲ್ಲದೆ, ಈ ದೇಶ ಹಿಂದುಗಳದ್ದು, ಹಿಂದುತ್ವವಾದಿಗಳದ್ದಲ್ಲ ಎಂದೂ ರಾಹುಲ್‌ ಇದೇ ವೇಳೆ ಪ್ರತಿಪಾದಿಸಿದರು.