ಏಷ್ಯನ್ ರೋಯಿಂಗ್‌ ಚಾಂಪಿಯನ್‌ಷಿಪ್‌: ಅರವಿಂದ್‌ ಸಿಂಗ್‌ಗೆ ಚಿನ್ನದ ಪದಕ

ಏಷ್ಯನ್ ರೋಯಿಂಗ್‌ ಚಾಂಪಿಯನ್‌ಷಿಪ್‌: ಅರವಿಂದ್‌ ಸಿಂಗ್‌ಗೆ ಚಿನ್ನದ ಪದಕ

ಬಾನ್ ಚಾಂಗ್‌, ಥಾಯ್ಲೆಂಡ್‌: ಅನುಭವಿ ರೋವರ್ ಅರವಿಂದ್‌ ಸಿಂಗ್ ಭಾನುವಾರ ಕೊನೆಗೊಂಡ ಏಷ್ಯನ್ ರೋಯಿಂಗ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಕೊನೆಯ ದಿನ ಭಾರತಕ್ಕೆ ಮೂರು ಬೆಳ್ಳಿ ಪದಕಗಳು ಕೂಡ ಒಲಿದವು.

7 ನಿಮಿಷ 55.942 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅರವಿಂದ್ ಸಿಂಗ್ ಅವರು ಉಜ್ಬೆಕಿಸ್ತಾನ, ಚೀನಾ, ವಿಯೆಟ್ನಾಂ, ಇಂಡೊನೇಷ್ಯಾ ಮತ್ತು ಥಾಯ್ಲೆಂಡ್‌ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು. ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಟ್ಟು ಎರಡು ಚಿನ್ನ ಮತ್ತು ನಾಲ್ಕು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.

ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್‌ನಲ್ಲಿ ಆಶಿಶ್‌ ಫುಗಟ್‌ ಮತ್ತು ಸುಖ್‌ಜಿಂದರ್‌ ಸಿಂಗ್‌ 7 ನಿಮಿಷ 12.568 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಪ್ರಬಲ ಪೈಪೋಟಿ ಕಂಡುಬಂದ ಕ್ವಾಡ್ರಪಲ್ ಸ್ಕಲ್ಸ್‌ನಲ್ಲಿ ಬಿಟ್ಟು ಸಿಂಗ್, ಝಕರ್ ಖಾನ್, ಮನ್‌ಜಿತ್ ಕುಮಾರ್ ಮತ್ತು ಸುಖ್‌ಮೀತ್‌ ಸಿಂಗ್ ಎರಡನೇ ಸ್ಥಾನ ಗಳಿಸಿದರು. 6 ನಿಮಿಷ 33:661 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು 0.523 ಸೆಕೆಂಡುಗಳ ಅಂತರದಲ್ಲಿ ಚಿನ್ನ ಕಳೆದುಕೊಂಡರು.

ಕಾಕ್ಸ್‌ಲೆಸ್ ಫೋರ್ ವಿಭಾಗದಲ್ಲಿ ಜಸ್ವೀರ್ ಸಿಂಗ್, ಪುನೀತ್‌ ಕುಮಾರ್, ಗುರುಮೀತ್‌ ಸಿಂಗ್ ಮತ್ತು ಚರಣ್‌ಜೀತ್‌ ಸಿಂಗ್‌ ಭಾರತಕ್ಕೆ ಬೆಳ್ಳಿ ಪದಕ ಗಳಿಸಿಕೊಟ್ಟರು. 6 ನಿಮಿಷ 51.661 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದ್ದರು.