2 ಕೋಟಿ ರೂ. ಮೌಲ್ಯದ ಭೂಮಿಗೆ 18 ಕೋಟಿ ರೂ.ಪಾವತಿ: ಅಯೋಧ್ಯೆ ಭೂ ಖರೀದಿಯಲ್ಲಿ ಭ್ರಷ್ಟಾಚಾರ

2 ಕೋಟಿ ರೂ. ಮೌಲ್ಯದ ಭೂಮಿಗೆ 18 ಕೋಟಿ ರೂ.ಪಾವತಿ: ಅಯೋಧ್ಯೆ ಭೂ ಖರೀದಿಯಲ್ಲಿ ಭ್ರಷ್ಟಾಚಾರ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಕಳೆದ ವರ್ಷ ಆದೇಶ ನೀಡಿದ ಬೆನ್ನಲ್ಲೇ ರಾಮಮಂದಿರ ನಿರ್ಮಾನಕ್ಕಾಗಿ ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಸಮಾಜವಾದಿ ಪಕ್ಷ(ಎಸ್ಪಿ) ಮತ್ತು ಆಮ್ ಆದ್ಮಿ ಪಕ್ಷ(ಎಎಪಿ) ಗಂಭೀರವಾಗಿ ಆರೋಪಿಸಿವೆ.

ಏತನ್ಮಧ್ಯೆ ರಾಮಜನ್ಮ ಭೂಮಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಲ್ಲಗಳೆದಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

ಮುಂಬರುವ ಫೆಬ್ರುವರಿ-ಮಾರ್ಚ್ ನಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ದುರುದ್ದೇಶದಿಂದ ಈ ಆರೋಪ ಮಾಡಲಾಗುತ್ತಿದೆ ಎಂದು ರಾಯ್ ದೂರಿದ್ದಾರೆ.

ಸಮಾಜವಾದಿ ಪಕ್ಷ, ಆಮ್ ಆರೋಪವೇನು?
ಸಮಾಜವಾದಿ ಪಕ್ಷ ಮತ್ತು ಆಪ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿಯನ್ನು ಮಾಡಿದ್ದು, ರಾಮಮಂದಿರಕ್ಕಾಗಿ ರಾಮಮಂದಿರ ಟ್ರಸ್ಟ್ ಅಧಿಕ ಬೆಲೆಗೆ ಭೂಮಿಯನ್ನು ಖರೀದಿಸಿದೆ ಎಂದು ಆರೋಪಿಸಿವೆ. 2ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು 18.5 ಕೋಟಿ ರೂಪಾಯಿಗೆ ಖರೀದಿಸಲಾಗಿದ್ದು, ಇದು ಅಕ್ರಮ ಹಣ ವರ್ಗಾವಣೆ ಪ್ರಕರಣವಾಗಿದೆ. ಅಲ್ಲದೇ ಈ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕೆಂದು ಸಮಾಜವಾದಿ ಪಕ್ಷದ ಮಾಜಿ ಸಚಿವ ಪವನ್ ಪಾಂಡೆ ಮತ್ತು ಆಪ್ ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಆಗ್ರಹಿಸಿದ್ದಾರೆ.

ಮಾರ್ಚ್ 18ರಂದು ಇಬ್ಬರು ರಿಯಲ್ ಎಸ್ಟೇಟ್ ಖರೀದಿದಾರರು ಅಯೋಧ್ಯೆಯ ಬಾಗ್ ಬೈಸೈ ಗ್ರಾಮದ ಸದರ್ ತಹಸಿಲ್ ನಲ್ಲಿರುವ 1.208 ಹೆಕ್ಟೇರ್ ಭೂಮಿಯನ್ನು 2 ಕೋಟಿ ರೂಪಾಯಿಗೆ ಖರೀದಿಸಿದ್ದರು ಎಂದು ಪವನ್ ಪಾಂಡೆ ಆರೋಪಿಸಿದ್ದಾರೆ. ಈ ಜಮೀನು ರಿಯಲ್ ಎಸ್ಟೇಟ್ ನವರು ಖರೀದಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಭೂಮಿಯನ್ನು ಶ್ರೀ ರಾಮ್ ಜನ್ಮ ಭೂಮಿ ತೀರ್ಥ್ ಕ್ಷೇತ್ರ 18.5 ಕೋಟಿ ರೂಪಾಯಿಗೆ ಖರೀದಿಸಿರುವುದಾಗಿ ವಿವರಿಸಿದೆ.