ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಮೆಹಬೂಬ ಅ ಅರಬ್ ಎಂದು ಘೋಷಣೆ ಮಾಡಿದರು. ಅಭ್ಯರ್ಥಿಯನ್ನು ಘೋಷಣೆ ಮಾಡಿದ ಬಳಿಕ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರವನ್ನು ಸಹ ನಡೆಸಿದರು. ಇಂಡಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ವೈ. ವಿ. ಪಾಟೀಲ್.
ಇಂಡಿಗೆ ಆಗಮಿಸಿದ ಜನಾರ್ದನ ರೆಡ್ಡಿಗೆ ಅದ್ದೂರಿ ಸ್ವಾಗತ ದೊರೆಯಿತು. ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಅವರನ್ನು ಬರಮಾಡಿಕೊಂಡರು. ಡೊಳ್ಳು ಕುಣಿತದ ಮೂಲಕ ಸ್ವಾಗತ ಕೋರಲಾಯಿತು. ಯುವಕರು ಕ್ರೇನ್ ಮೂಲಕ ಬೃಹತ್ ಹೂ ಮಾಲೆ ಹಾಕಿ ಪ್ರೀತಿಯಿಂದ ಸ್ವಾಗತ ಮಾಡಿದರು. ಜನಾರ್ದನ ರೆಡ್ಡಿ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಹೂ ಮಾಲೆ ಹಾಕಿ ನಮನ ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ನೂರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಇಂಡಿ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯನ್ನಾಗಿ ಮೆಹಬೂಬ ಅ ಅರಬ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಬಳಿಕ ಕಾರ್ಯಕರ್ತರ ಜೊತೆ ಸಾಗಿ ಇಂಡಿ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಛೇರಿ ಉದ್ಘಾಟಿಸಿದರು.
ಇಂಡಿ ವಿಧಾನಸಭಾ ಕ್ಷೇತ್ರದ ಕುರಿತು ಇಂಡಿ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಹೆಚ್ಚು ಹರಿಯುವುದು ಇಂಡಿ ಕ್ಷೇತ್ರದ ವ್ಯಾಪ್ತಿಯಲ್ಲಿಯೇ. ಭೀಮಾ ನದಿ ಹರಿದರೂ ಬೇಸಿಗೆ ಬಂದರೆ ಜನರು ನೀರಿಗಾಗಿ ಪರಿತಪಿಸುತ್ತಾರೆ. ಮೂರು ಜನರು ಮೂರು ಬಾರಿ ಇಂಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರವಿಕಾಂತ ಪಾಟೀಲ ಪಕ್ಷೇತರರಾಗಿ ಕಣಕ್ಕಿಳಿದರೂ ಮೂರು ಬಾರಿ ಗೆಲುವು ಕಂಡಿದ್ದಾರೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೈ. ವಿ. ಪಾಟೀಲ್ 50,401 ಮತಗಳನ್ನು ಪಡೆದು ಜಯಗಳಿಸಿದರು. ಜೆಡಿಎಸ್‌ನ ಬಿ. ಡಿ. ಪಾಟೀಲ್ 40,463 ಮತಗಳನ್ನು ಪಡೆದು 2ನೇ ಸ್ಥಾನ ಪಡೆದರು. ಬಿಜೆಪಿಯ ಡಿ. ಬಿ. ಪಾಟೀಲ 38,941 ಮತಗಳನ್ನು ಪಡೆದು ಪೈಪೋಟಿ ನೀಡಿದರು. ರವಿಕಾಂತ ಪಾಟೀಲ ಪಕ್ಷೇತರನಾಗಿ ನಿಂತು 31,425 ಮತಗಳನ್ನು ಪಡೆದಿದ್ದರು.