ಟೆನಿಸ್ ಪಯಣಕ್ಕೆ ಸಾನಿಯಾ ಪೂರ್ಣವಿರಾಮ

ಹೈದರಾಬಾದ್: ಟೆನಿಸ್ ಬದುಕನ್ನು ಆರಂಭಿಸಿದ ಹೈದರಾಬಾದ್‌ನಲ್ಲೇ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಟೆನಿಸ್ ಆಟ ಕೊನೆಗೊಂಡಿದೆ. ಭಾನು ವಾರ ಇಲ್ಲಿನ ಲಾಲ್ ಬಹಾದೂರ್ ಟೆನಿಸ್ ಸ್ಟೇಡಿಯಂನಲ್ಲಿ ಸಾನಿಯಾ ಪ್ರದರ್ಶನ ಪಂದ್ಯವಾಡಿ ರ‍್ಯಾಕೆಟ್ ತ್ಯಜಿಸಿದರು.
ಈ ಪ್ರದರ್ಶನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಅವರ ಮಿಶ್ರ ಡಬಲ್ಸ್ ಜತೆಗಾರ ರೋಹನ್ ಬೋಪಣ್ಣ, ಬೆಥನಿ ಮಾಟೆಕ್ ಸ್ಯಾಂಡ್ಸ್ ಆಡಿದರು. ಸಾನಿಯಾ ಮಿರ್ಜಾ ಅವರ ಮಗ, ಕುಟುಂಬದ ಸದಸ್ಯರು, ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಯುವರಾಜ್ ಸಿಂಗ್, ತೆಲಂಗಾಣದ ಸಚಿವ ಕೆ.ಟಿ. ರಾಮ ರಾವ್ ಮೊದಲಾದವರು ಪ್ರದರ್ಶನ ಪಂದ್ಯ ವೀಕ್ಷಿಸಿದರು.
ವಿದ್ಯಾರ್ಥಿಗಳ ದಂಡೇ ನೆರೆದಿತ್ತು. ವೀಕ್ಷಕರು ಥ್ಯಾಂಕ್ಯೂ ಫಾರ್ ದಿ ಮೆಮೊರೀಸ್’, ವೀ ವಿಲ್ ಮಿಸ್ ಯೂ’ ಮೊದಲಾದ ಪ್ಲೆಕಾರ್ಡ್ ಹಿಡಿದು ಸ್ಟಾರ್ ಆಟಗಾರ್ತಿಗೆ ಶುಭ ವಿದಾಯ ಕೋರಿದರು. ವಿದಾಯದ ಸಂದರ್ಭವಾದರೂ ಅಲ್ಲೊಂದು ಹಬ್ಬದ ವಾತಾವರಣ ಮನೆಮಾಡಿತ್ತು.
ಪಂದ್ಯದ ಬಳಿಕ ವಿದಾಯ ಭಾಷಣ ಮಾಡುವ ವೇಳೆ ಸಾನಿಯಾ ಮಿರ್ಜಾ ತೀವ್ರ ಭಾವುಕರಾದರು. ಇದು ಸಂತೋಷದ ಕಣ್ಣೀರು, ಇದಕ್ಕಿಂತ ಮಿಗಿಲಾದ, ಸ್ಮರಣೀಯ ವಿದಾಯವನ್ನು ತಾನು ಬಯಸಿರಲಿಲ್ಲ ಎಂದರು. ತಮ್ಮ ಟೆನಿಸ್ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೈದರಾಬಾದ್ ನಂಟನ್ನು ಸ್ಮರಿಸಿಕೊಂಡರು. ಸ್ಟಾರ್ ಆಟಗಾರ್ತಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.