ಅನಗತ್ಯ ಅಧಿಕಾರಿಗಳಿಗೆ ಕೊಕ್: 2 ಸಾವಿರ ಹುದ್ದೆಗಳು ರದ್ದು; ಸಂಪುಟ ಉಪಸಮಿತಿ ಶಿಫಾರಸು

ಬೆಂಗಳೂರು: ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸಚಿವಾಲಯ ಮಟ್ಟದ, ಉನ್ನತ ಹಾಗೂ ಹಿರಿಯ ಶ್ರೇಣಿಯ ಎರಡು ಸಾವಿರ ಹುದ್ದೆಗಳನ್ನು ರದ್ದುಪಡಿಸಲು ಸಚಿವ ಸಂಪುಟದ ಉಪಸಮಿತಿ ಮಂಗಳವಾರ ಶಿಫಾರಸು ಮಾಡಿದೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ಕಂದಾಯ ಸಚಿವ ಆರ್.
ಆಧುನಿಕ ತಂತ್ರಜ್ಞಾನ ಬಳಕೆ, ಗಣಕೀಕರಣ, ಆನ್ಲೈನ್ ಸೇವೆ, ಹೊಸ ಆವಿಷ್ಕಾರಗಳಿಂದ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ'ಕ್ಕೆ ಒತ್ತು ನೀಡಲಾಗುತ್ತಿದೆ. ಜತೆಗೆ ಎಲ್ಲ ಆಯಾಮದಿಂದಲೂ 'ಜನೋಪಯೋಗಿ'ಯಾಗುವ ನಿಟ್ಟಿನಲ್ಲಿ ಮುಂದುವರಿಯಲಿದೆ. ಕೆಲಸದ ಅಗತ್ಯಕ್ಕಿಂತಲೂ ಅಧಿಕಾರಿಗಳ ಅವಶ್ಯಕತೆಗೆ ತಕ್ಕಂತೆ ಉನ್ನತ, ಹಿರಿಯ ಅಧಿಕಾರಿಗಳ ಹುದ್ದೆಗಳು ಸೃಜನೆಯಾಗಿವೆ. ಆಡಳಿತ ಇಲಾಖೆಗಳ ಕಚೇರಿಗಳಲ್ಲಿ ಕಾಲಾಳುಗಿಂತ ಮೇಲಾಳು ಜಾಸ್ತಿಯಾಗಿದೆ ಎನ್ನುವ ಸ್ಥಿತಿ ನಿರ್ವಣವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಪಸಮಿತಿ ಶಿಫಾರಸುಗಳನ್ನು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿನ ಸಚಿವಾಲಯ ಮಟ್ಟದ, ಉನ್ನತ ಅಧಿಕಾರಿಗಳ ಹುದ್ದೆಗಳನ್ನು ತೆಗೆದುಹಾಕಿ, ಕೆಲಸಕ್ಕೆ ಅನುಗುಣವಾಗಿ ಕೆಳಹಂತದ ಸಿಬ್ಬಂದಿ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸುಧಾರಣೆ, ವೆಚ್ಚಕ್ಕೆ ಕಡಿವಾಣ: ಆದೇಶ ಪಾಲಿಸುವ ಸಿಬ್ಬಂದಿ ಬದಲಿಗೆ ಆದೇಶ ಹೊರಡಿಸುವ ಅಧಿಕಾರಿಗಳ ಹುದ್ದೆಗಳ ರದ್ಧತಿಯಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿತಾಯವಾಗಲಿದೆ. ಅಲ್ಲದೆ, ಈ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ. ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗ ಮತ್ತು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ಭಾಸ್ಕರ್ ಅವರ ಆಡಳಿತ ಸುಧಾರಣೆ ವರದಿ-2ರ ಶಿಫಾರಸುಗಳು ಅನಗತ್ಯ ವಿಳಂಬ ತಪ್ಪಿಸಲು ಏನೆಲ್ಲ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಹುದ್ದೆಗಳ ರದ್ದು, ಇಲಾಖೆಗಳ ವಿಲೀನ ಪ್ರಕ್ರಿಯೆ ಮುಂದುವರಿಕೆ ಭಾಗವಾಗಿ ಪ್ರಮುಖ ತೀರ್ವನಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆಲ್ಲ ಒಪ್ಪಿಗೆ ಕೋರಿ ಸಚಿವ ಸಂಪುಟ ಸಭೆಗೆ ಉಪಸಮಿತಿ ಶಿಫಾರಸು ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾರ್ಯಾಂಗದಲ್ಲಿ ದಕ್ಷತೆ, ಪರಿಣಾಮಕಾರಿ ಅಭಿವೃದ್ಧಿ, ಅನಗತ್ಯ ವೆಚ್ಚಕ್ಕೆ ಕಡಿವಾಣ, ಕಾರ್ಯಭಾರ ಇಲ್ಲದಿದ್ದರೂ ಸೃಜಿಸಿದ ಉನ್ನತ ಹುದ್ದೆಗಳ ರದ್ದು ಇವೆಲ್ಲ ಆಡಳಿತ ಸುಧಾರಣೆ ಭಾಗವಾಗಿವೆ. ಈ ನಿಟ್ಟಿನಲ್ಲಿ ಕೈಗೊಂಡ ತೀರ್ವನಗಳ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆ ಮುಂದಿಡಲಾಗುವುದು.
| ಆರ್. ಅಶೋಕ್ ಆಡಳಿತ ಸುಧಾರಣೆ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷ
ವರದಿ ಸಲ್ಲಿಕೆಗೆ ಸೂಚನೆ: ಅರಣ್ಯ ಸಂರಕ್ಷಣೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವಿಲೀನದ ಬಗ್ಗೆ ಗಂಭೀರ ಚರ್ಚೆಯಾಗಿದ್ದು, ಒಮ್ಮತ ಮೂಡದ ಕಾರಣ ಸಾಧಕ-ಬಾಧಕ ಪರಾಮಶಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಚಿವ ಸಂಪುಟದ ಉಪಸಮಿತಿ ಸೂಚಿಸಿದೆ. ಮಲೆನಾಡು, ಕರಾವಳಿ ಮುಂತಾದ ದಟ್ಟ ಅರಣ್ಯವಿರುವ ಜಿಲ್ಲೆಗಳಲ್ಲಿ ಅರಣ್ಯ ಸಂರಕ್ಷಣಾ ಇಲಾಖೆ ಮುಂದುವರಿಸಿ, ಸಾಮಾಜಿಕ ಅರಣ್ಯ ತೆಗೆದುಹಾಕುವುದು. ಉಳಿದ ಜಿಲ್ಲೆಗಳಲ್ಲಿ ಜಿಲ್ಲಾ, ತಾಲೂಕು ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕೈಬಿಟ್ಟು ಸಾಮಾಜಿಕ ಅರಣ್ಯ ಇಲಾಖೆ ಮುಂದುವರಿಸುವುದು ಈ ಚರ್ಚೆಯ ಮುಖ್ಯಾಂಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆರ್ಸಿ, ಐಎಫ್ಎಸ್ ಸಂಖ್ಯೆ ಕಡಿತ?: ರಾಜ್ಯದಲ್ಲಿ 150 ಭಾರತೀಯ ಅರಣ್ಯ ಸೇವೆಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು, ಈ ಸಂಖ್ಯೆಯನ್ನು ಕಡಿತಗೊಳಿಸಲು ಸಮಿತಿ ಸಭೆ ಗಂಭೀರ ಚಿಂತನೆ ನಡೆಸಿದೆ. ಹೆಚ್ಚುವರಿ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಮರಳಿಸುವ ವಿಚಾರವನ್ನು ಮತ್ತೊಂದು ಸುತ್ತಿನ ಸಭೆಯಲ್ಲಿ ಅಂತಿಮಗೊಳಿಸಲು ನಿರ್ಧರಿಸಿದೆ. ವರ್ಷಕ್ಕೆ ಐದಾರು ಮೇಲ್ಮನವಿಗಳ ವಿಚಾರಣೆಗಾಗಿ 4 ಕಂದಾಯ ವಿಭಾಗಗಳಲ್ಲಿನ ಪ್ರಾದೇಶಿಕ ಆಯುಕ್ತರಕಚೇರಿ ಮುಂದುವರಿಸುವ ಔಚಿತ್ಯವೂ ಮತ್ತೆ ಪ್ರಸ್ತಾಪವಾಗಿದೆ. 4 ಪ್ರಾದೇಶಿಕ ಅಯುಕ್ತರ ಕಚೇರಿಗಳನ್ನು ಮುಚ್ಚಿದರೆ ಒಟ್ಟು ಮಂಜೂರಾದ 549 ಅಧಿಕಾರಿ, ಸಿಬ್ಬಂದಿ ಹುದ್ದೆಗಳು ಕಂದಾಯ ಇಲಾಖೆಯಲ್ಲಿ ವಿಲೀನವಾಗಲಿವೆ.
ಯಾವುದೆಲ್ಲ ವಿಲೀನ?
- ಶಿಕ್ಷಣ ಇಲಾಖೆಯಲ್ಲಿ ಮುದ್ರಣ, ಲೇಖನ ಸಾಮಗ್ರಿ, ಪ್ರಕಟಣೆ ಇಲಾಖೆ
- ಪ್ರವಾಸೋದ್ಯಮ ಇಲಾಖೆಯಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಯಾವುದು ರದ್ದು?
- ಕೃಷಿ ಇಲಾಖೆಯಡಿ ಬರುವ ಮೈಸೂರು ತಂಬಾಕು ಕಂಪನಿ, ಕರ್ನಾಟಕ ಕೃಷಿ ಕೈಗಾರಿಕಾ ನಿಗಮ, ಕರ್ನಾಟಕ ಆಹಾರ ನಿಗಮ
- ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲಿನ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳ ಹುದ್ದೆಗಳು. ಕೆಳಹಂತದ ಸಿಬ್ಬಂದಿ ಕೃಷಿ ಇಲಾಖೆಗೆ ಹಸ್ತಾಂತರ
- ಬೆಂಗಳೂರು ಸುತ್ತಮುತ್ತಲಿನ ನೆಲಮಂಗಲ, ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಬೆಂಗಳೂರು ಏರ್ಪೋರ್ಟ್ ಸೇರಿ 10 ಯೋಜನಾ ಪ್ರಾಧಿಕಾರಗಳ ರದ್ದು, ಪ್ರತಿ ಜಿಲ್ಲೆಗೆ ಒಂದು ಯೋಜನಾ ಪ್ರಾಧಿಕಾರ ರಚನೆ